ಬೆಂಗಳೂರು: ವ್ಹೀಲಿಂಗ್ ಮಾಡದಂತೆ ತಿಳಿ ಹೇಳಿದ್ದ ಯುವಕನ ಹತ್ಯೆ!

ಬೆಂಗಳೂರು: ಯುವಕರ ನಡುವೆ ಆರಂಭವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಕೆ.ಪಿ. ಅಗ್ರಹಾರದ ಪೈಪ್ ಲೈನ್ ರಸ್ತೆಯಲ್ಲಿ ನಡೆದಿದೆ.
ಪೈಪ್ ಲೈನ್ ರಸ್ತೆಯ ಥಾಮಸ್(19) ಕೊಲೆಯಾಗಿದ ಯುವಕ, ಕೆಲ ಯುವಕರು ಪ್ರತಿನಿತ್ಯ ಥಾಮಸ್ ಮನೆಯ ಮುಂದಿನ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ, ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದರು. ಇದರಿಂದ ಮನೆ ಬಳಿ ವ್ಹೀಲಿಂಗ್ ಮಾಡದಂತೆ ಥಾಮಸ್ ತಿಳಿ ಹೇಳಿದ್ದರೆನ್ನಲಾಗಿದೆ.
ಸಿಟ್ಟಿಗೆದ್ದ ಆರೋಪಿಗಳು, ನಿನ್ನೆ ಸಂಜೆ ಪೈಪ್‍ಲೈನ್ ರಸ್ತೆಯ ಚರ್ಚ್ ಬಳಿ ಕುಳಿತಿದ್ದ ಥಾಮಸ್ ಮೇಲೆ ಏಕಾಏಕಿ ದಾಳಿ ನಡೆಸಿ ಮನಬಂದಂತೆ ಥಳಿಸಿ ಆತನ ಎದೆ ಮತ್ತು ಪಕ್ಕೆಲುಬಿಗೆ ಚಾಕು ಇರಿದು ಪರಾರಿಯಾಗಿದ್ದರು. ಪರಿಣಾಮವಾಗಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಥಾಮಸ್‍ನನ್ನ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಕೆ.ಪಿ.ಅಗ್ರಹಾರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾರೆ.





