ಪ್ರಮೋದ್ ಸಾವಂತ್ ರಾಜೀನಾಮೆ, ನೂತನ ಗೋವಾ ಮುಖ್ಯಮಂತ್ರಿ ಕುರಿತು ಗುಟ್ಟು ಬಿಡದ ಬಿಜೆಪಿ

photo pti
ಪಣಜಿ,ಮಾ.12: ಗೋವಾದಲ್ಲಿ ಸತತ ಮೂರನೇ ಬಾರಿ ಸರಕಾರ ರಚನೆಗೆ ಪಕ್ಷದ ಸಿದ್ಧತೆಗಳ ನಡುವೆಯೇ ಬಿಜೆಪಿಯ ಪ್ರಮೋದ್ ಸಾವಂತ್ ಅವರು ಶನಿವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಶುಕ್ರವಾರ ಚುನಾವಣಾ ಫಲಿತಾಂಶಗಳು ಪ್ರಕಟಗೊಂಡಿದ್ದು,ರಾಜ್ಯ ವಿಧಾನಸಭೆಯ 40 ಸ್ಥಾನಗಳ ಪೈಕಿ 20ನ್ನು ಗೆದ್ದಿರುವ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿದೆ. ಪ್ರಮುಖ ಪ್ರಾದೇಶಿಕ ಪಕ್ಷ ಎಂಜಿಪಿ ಮತ್ತು ಮೂವರು ಪಕ್ಷೇತರ ಶಾಸಕರ ಬೆಂಬಲವನ್ನು ಪಡೆಯುವಲ್ಲಿ ಅದು ಯಶಸ್ವಿಯಾಗಿದೆ.
‘ಜನತೆಯ ಆಶೀರ್ವಾದಗಳೊಂದಿಗೆ ಬಿಜಪಿಯು ರಾಜ್ಯದಲ್ಲಿ ಮತ್ತೊಮ್ಮೆ ಸರಕಾರವನ್ನು ರಚಿಸಲಿದೆ ಮತ್ತು ಅದು ಅಂತ್ಯೋದಯ ನೀತಿಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಲಿದೆ. ಪ್ರಧಾನಿ ಮೋದಿಯವರ ಕ್ರಿಯಾತ್ಮಕ ನಾಯಕತ್ವದಡಿ ಡಬಲ್ ಇಂಜಿನ್ ಸರಕಾರದೊಂದಿಗೆ ಗೋವಾ ಸಮೃದ್ಧಿಯತ್ತ ಮುನ್ನಡೆಯಲಿದೆ ’ಎಂದು ಸಾವಂತ ಟ್ವೀಟಿಸಿದ್ದಾರೆ.
ಸರಕಾರ ರಚನೆಗೆ ಸಿದ್ಧತೆಗಳು ನಡೆಯುತ್ತಿವೆಯಾದರೂ ಮುಂದಿನ ಮುಖ್ಯಮಂತ್ರಿ ಯಾರೆಂಬ ಕುತೂಹಲವನ್ನು ಬಿಜೆಪಿ ಉಳಿಸಿಕೊಂಡಿದೆ.
ತನ್ನ ಸಾಂಪ್ರದಾಯಿಕ ಸಾಂಖಳಿ ಕ್ಷೇತ್ರದಿಂದ ಅಲ್ಪ ಮತಗಳ ಅಂತರದೊಂದಿಗೆ ಗೆದ್ದಿರುವ ಸಾವಂತ್ ಅವರನ್ನು ಬದಲಿಸಲು ಪಕ್ಷವು ಚಿಂತನೆ ನಡೆಸುತ್ತಿದೆ ಎಂದು ವರದಿಗಳು ಹೇಳಿವೆ.
‘ನಾನು ಅಲ್ಪಮತಗಳ ಅಂತರದಿಂದ ಗೆದ್ದಿರಬಹುದು,ಆದರೆ ನಾವು (ಬಿಜೆಪಿ) ಬಹುಮತದಿಂದ ಗೆದ್ದಿದ್ದೇವೆ. ಅದು ಮುಖ್ಯ ಮತ್ತು ಅದು ನನಗೆ ಸವಾಲು ಆಗಿತ್ತು. ನಾನು ರಾಜ್ಯಾದ್ಯಂತ ಪ್ರಚಾರದಲ್ಲಿ ನಿರತನಾಗಿದ್ದೆ,ಆದರೆ ನನ್ನ ಸ್ವಂತ ಕ್ಷೇತ್ರವನ್ನು ತಲುಪಲಾಗಿರಲಿಲ್ಲ. ಅಲ್ಲಿ ನನ್ನ ಕಾರ್ಯಕರ್ತರೇ ನನಗಾಗಿ ಪ್ರಚಾರವನ್ನು ಮಾಡಿದ್ದರು ’ಎಂದು ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಸಾವಂತ್ ಹೇಳಿದ್ದರು.
ಸಾವಂತ್ ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳುತ್ತಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು,ತನಗೆ ಗೊತ್ತಿಲ್ಲ,ಇದೊಂದು ಸೂಕ್ಷ್ಮ ಪ್ರಶ್ನೆಯಾಗಿದೆ. ಈ ಬಗ್ಗೆ ಹೇಳಲು ಕಾಲ ಪಕ್ವಗೊಂಡಿಲ್ಲ ಎಂದು ಉತ್ತರಿಸಿದರು.
ರಾಣೆಯವರನ್ನು ನೂತನ ಮುಖ್ಯಮಂತ್ರಿಯಾಗಿ ನೇಮಿಸುವಂತೆ ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ.







