ನನ್ನ ಮಗನಿಗೆ ಟಿಕೆಟ್ ನೀಡುವ ಪಕ್ಷಕ್ಕೆ ನಾನು ಸೇರ್ಪಡೆಯಾಗುತ್ತೇನೆ: ಶಾಸಕ ಜಿ.ಟಿ. ದೇವೇಗೌಡ

ಶಾಸಕ ಜಿ.ಟಿ. ದೇವೇಗೌಡ
ಮೈಸೂರು: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನನ್ನ ಮಗನಿಗೆ ಟಿಕೆಟ್ ನೀಡುವ ಪಕ್ಷಕ್ಕೆ ನಾನು ಸೇರ್ಪಡೆಯಾಗುತ್ತೇನೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಗನಿಗೆ ಯಾವ ಪಕ್ಷ ಟಿಕೆಟ್ ನೀಡುತ್ತದೊ ಆ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ, ನನ್ನ ಮಗ ಹರೀಶ್ ಗೌಡನಿಗೆ ಟಿಕೆಟ್ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ಸ್ಪಷ್ಟವಾಗಿ ಹೇಳಿದ್ದೇನೆ. ಕಾಂಗ್ರೆಸ್ ಪಕ್ಷ ತನ್ನ ತೀರ್ಮಾನ ಹೇಳಿದ ಬಳಿಕ ಮುಂದಿನ ಮಾತುಕತೆ ನಡೆಸುತ್ತೇನೆ ಎಂದರು.
ನಾನು ಮೊದಲು ಹುಣಸೂರು, ನಂತರ ಕೆ.ಆರ್.ನಗರ ಹಾಗೂ ಮೈಸೂರು ನಗರದ ಚಾಮರಾಜ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕೆಂದು ಮೂರು ಆದ್ಯತೆ ಬಗ್ಗೆ ಹೇಳಿದ್ದೇನೆ. ಈ ಮೂರರಲ್ಲಿ ಕಾಂಗ್ರೆಸ್ ಯಾವುದೇ ಒಂದು ಕ್ಷೇತ್ರದಿಂದ ಟಿಕೆಟ್ ನೀಡುವ ಬಗ್ಗೆ ಖಚಿತವಾದರೆ, ನಾನು ಕಾಂಗ್ರೆಸ್ ಪಕ್ಷವನ್ನೇ ಸೇರುತ್ತೇನೆ. ಜೊತೆಗೆ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಜಿ.ಟಿ.ದೇವೇಗೌಡ ತಿಳಿಸಿದರು.
ಇತ್ತೀಚೆಗೆ ಬಿಜೆಪಿಯವರು ನನ್ನನ್ನ ಸಂಪರ್ಕ ಮಾಡಿದ್ದು, ತಂದೆ ಮತ್ತು ಮಗನಿಗೆ ಇಬ್ಬರಿಗೂ ಟಿಕೆಟ್ ಕೊಡುವ ಭರವಸೆಯನ್ನು ನೀಡಿದ್ದಾರೆ. 6 ತಿಂಗಳ ನಂತರ ಚಾಮುಂಡಿ ತಾಯಿ ನಿರ್ಣಯದಂತೆ ನಾನು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.







