ಮಾನವೀಯತೆ ಮರೆತ ಆಧುನಿಕ ಸಮಾಜ ನಿರ್ಮಾಣದತ್ತ ಸಾಗುತ್ತಿದ್ದೇವೆ: ಪ್ರೊ. ಎಸ್.ಜಿ. ಸಿದ್ದರಾಮಯ್ಯ
ಜಾಣಗೆರೆ ವೆಂಕಟರಾಮಯ್ಯರ ‘ಬೂಮ್ತಾಯಿ’ ಕೃತಿ ಬಿಡುಗಡೆ

ಬೆಂಗಳೂರು: ಸಮಾಜಕ್ಕೆ ಅಹಿತಕರವೆನಿಸುವ ದಿಕ್ಕಿನಲ್ಲಿ ಇಂದು ನಾವೆಲ್ಲರೂ ಸಾಗುತ್ತಿದ್ದೇವೆ. ಹಾಗಾಗಿ ಮಾನವೀಯತೆ ಮರೆತ ಆಧುನಿಕ ಸಮಾಜ ನಿರ್ಮಾಣವಾಗಿದೆ ಎಂದು ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಗಾಂಧಿ ಭವನದಲ್ಲಿ ಸಾಹಿತ್ಯ ಸಂಗಮ ಟ್ರಸ್ಟ್ ಹಾಗೂ ಜಾಣಗೆರೆ ಪತ್ರಿಕೆ ಪ್ರಕಾಶನ ವತಿಯಿಂದ ಜಾಣಗೆರೆ ವೆಂಕಟರಾಮಯ್ಯ ರಚಿಸಿದ ‘ಬೂಮ್ತಾಯಿ’ ಕಾದಂಬರಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ, ವರ್ಗ, ಧಾರ್ಮಿಕ ಸಂಘರ್ಷದಂತಹ ಅಹಿತಕರವೆನಿಸುವ ದಿಕ್ಕಿನಲ್ಲಿ ನಾವು ಸಾಗುತ್ತಿದ್ದೇವೆ. ಮಾನವೀಯ ಮೌಲ್ಯಗಳು ನಾಶವಾಗಿ ಇಂದು ಎಲ್ಲ ದಿಕ್ಕಿನಲ್ಲಿ ಅಶಾಂತಿ ಆವರಿಸಿದೆ. ಸಮಾಜವು ಹೆಣ್ಣಿಗೆ ಸಿಗಬೇಕಾದ ಆರ್ಥಿಕ, ಸಾಮಾಜಿಕ ಭದ್ರತೆಯನ್ನು ಕಸಿದುಕೊಂಡು ದ್ರೋಹ ಎಸಗುತ್ತಿರುವುದಲ್ಲದೆ, ಹೆಣ್ಣನ್ನು ಭೋಗದ ವಸ್ತುವನ್ನಾಗಿಸಿದೆ ಎಂದು ತಿಳಿಸಿದರು.
ಸ್ವಾರ್ಥ ಮತ್ತು ದುರಾಸೆಗಳಿಂದ ಇಂದು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಯುದ್ಧಗಳು ನಡೆಯುತ್ತಿವೆ. ಮಾನವ ಸಂಕುಲ ವಿನಾಶದತ್ತ ಸಾಗುತ್ತಿದೆ. ಎಡ-ಬಲದ ಪ್ರಜ್ಞೆ ಅಜಾಗರೂಕತೆಗೆ ಜಾರಿದ ಪರಿಣಾಮ ಇವೆರಡರ ಉದ್ದೇಶವು ಸಮಾಜವನ್ನು ಸುಡುತ್ತಿದೆ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ಕೃತಿಕಾರ ಜಾಣಗೆರೆ ವೆಂಕಟರಾಮಯ್ಯ, ಕೆ.ಇ.ರಾಧಾಕೃಷ್ಣ, ಬಿ.ಎಂ. ಹನೀಫ್, ಎಚ್.ದಂಡಪ್ಪ, ಪ್ರೇಮ್‍ಕುಮಾರ್ ಹರಿಯಬ್ಬೆ, ಕೃಷ್ಣ ಮಾಸಡಿ ಮತ್ತಿತರರು ಉಪಸ್ಥಿತರಿದ್ದರು.







