ಹಣ, ಜಾತಿ ಬಲದಿಂದ ಸಮಾಜವಾದಿ ತತ್ವಗಳೇ ಕಣ್ಮರೆ: ಸಭಾಪತಿ ಬಸವರಾಜ ಹೊರಟ್ಟಿ
‘ಶಾಂತವೇರಿ ಗೋಪಾಲಗೌಡ ಪ್ರಶಸ್ತಿ’ ಪ್ರದಾನ

ಬೆಂಗಳೂರು, ಮಾ. 12: ‘ಪ್ರಸ್ತುತ ಹಣ, ಜಾತಿಯ ಬಲ ಇರುವವರು ವಿಧಾನಸಭೆ ಮತ್ತು ವಿಧಾನ ಪರಿಷತ್ತಿಗೆ ಆಯ್ಕೆಯಾಗುತ್ತಿರುವುದರಿಂದ ‘ಸಮಾಜವಾದಿ' ತತ್ವ ಮತ್ತು ಮೌಲ್ಯಾಧಾರಿತ ರಾಜಕೀಯ ಅಂಶಗಳಿಗೆ ಅವಕಾಶವೇ ಇಲ್ಲವಾಗಿದೆ' ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಕಸಾಪ ಸಭಾಂಗಣದಲ್ಲಿ ಕನ್ನಡ ಜನಶಕ್ಕಿ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ‘ಶಾಂತವೇರಿ ಗೋಪಾಲಗೌಡ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾಜಿ ಸಚಿವ ಹಾಗೂ ಚಿತ್ರದುರ್ಗದ ಹಿರಿಯ ರಾಜಕಾರಣಿ ಏಕಾಂತಯ್ಯ ಅವರಿಗೆ 2021ನೆ ಸಾಲಿನ ಗೋಪಾಲಗೌಡ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.
‘ಯುವ ಜನಾಂಗಕ್ಕೆ ಸಮಾಜವಾದಿ ಚಿಂತನೆಗಳು ಬೇಕಾಗಿಲ್ಲ. ಶಾಸನ ಸಭೆಗಳಲ್ಲಿಯೂ ಇಂತಹ ಚಿಂತನೆಗಳಿಗೆ ಅವಕಾಶವೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ' ಎಂದು ಖೇಧ ವ್ಯಕ್ತಪಡಿಸಿದ ಹೊರಟ್ಟಿ, ‘ಸಮಾಜವಾದಿ ಚಿಂತಕ ಶಾಂತವೇರಿ ಗೋಪಾಲಗೌಡರ ಜೀವನ ಬದುಕಿನ ಕುರಿತು ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲಾ ಪಠ್ಯ-ಪುಸ್ತಕಗಳಲ್ಲಿ ಅಳವಡಿಸುವ ಅಗತ್ಯವಿದೆ' ಎಂದು ಪ್ರತಿಪಾದಿಸಿದರು.
‘ಇಂದಿನ ಯುವಜನರಿಗೆ ಇಂತಹ ಮೌಲ್ಯಯುತ ರಾಜಕಾರಣಿಗಳ ಪರಿಚಯ ಮಾಡಬೇಕಾಗಿದೆ. ಸಮಾಜವಾದಿ ಚಿಂತನೆಗಳ ಮೂಲಕ ಜನಮಾನಸದಲ್ಲಿ ಜೀವಂತವಾಗಿರುವ ಗೋಪಾಲಗೌಡರು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಇಂದಿಗೂ ದಂತಕತೆಯಾಗಿ ಉಳಿದಿದ್ದಾರೆ. ಈ ನಾಡು ಕಂಡ ಶ್ರೇಷ್ಠ ಮೌಲ್ಯಾಧಾರಿತ ರಾಜಕಾರಣಿಗಳಲ್ಲಿ ಅವರು ಅಗ್ರಪಂಕ್ತಿಯಲ್ಲಿದ್ದಾರೆ' ಎಂದು ಹೊರಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
‘ಮಾಜಿ ಸಚಿವ ಎಂ.ಪಿ.ಪ್ರಕಾಶ್ ಅವರು ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಆದರೂ, ಅಲ್ಲಿಯ ಜನ ಅವರನ್ನು ಸೋಲಿಸಿದ್ದರು. ನಾನು ಶಿಕ್ಷಕರ ಕ್ಷೇತ್ರವಲ್ಲದೆ ಜನಪ್ರತಿನಿಧಿಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದರೆ ನನ್ನನ್ನೂ ಜನ ರಾಜಕಾರಣದಲ್ಲಿ ಈವರೆಗೂ ಮುಂದುವರೆಸಲು ಅವಕಾಶ ನೀಡುತ್ತಿರಲಿಲ್ಲ' ಎಂದು ಬಸವರಾಜ ಹೊರಟ್ಟಿ, ರಾಜಕಾರಣದ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟದರು.
‘ಈ ಹಿಂದೆ ಪರಿಷತ್ ಸದಸ್ಯರಾಗಿ ಗಂಗೂಬಾಯಿ ಹಾನಗಲ್ ಅವರು ಸೇರಿದಂತೆ ಶ್ರೇಷ್ಠ ಸಾಧಕರು ಶಿಕ್ಷಣ, ಸಂಗೀತ ಕ್ಷೇತ್ರದ ತಜ್ಞರು ಆಯ್ಕೆ ಆಗಿ ಬರುತ್ತಿದ್ದರು. ಸದನಗಳಲ್ಲಿನ ಚರ್ಚೆ ಗುಣಮಟ್ಟ ಇತ್ತು. ಸದನ ಅಕ್ಷರಶಃ ಚಿಂತಕರ ಚಾವಡಿಯಾಗಿತ್ತು. ಆದರೆ, ಈಗ ಆ ವಾತಾವರಣ ಇಲ್ಲ. ಪರಿಷತ್‍ನ ಸಭಾಪತಿಯಾಗಿ ಏಕೆ ಕುಳಿತು ಕೊಂಡಿದ್ದೇನೆಂದು ಮನಸ್ಸಿಗೆ ಬೇಸರವಾಗುತ್ತಿದೆ' ಎಂದು ಹೊರಟ್ಟಿ ತಮ್ಮ ಮನದಾಳದ ಇಂಗಿತವನ್ನು ಬಹಿರಂಗಪಡಿಸಿದರು.
‘ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗ್ಡೆ ಮತ್ತು ಎಸ್.ಆರ್.ಬೊಮ್ಮಾಯಿ ಅವರ ಸರಕಾರದಲ್ಲಿ ಕೆಲಸ ಮಾಡಿರುವ ಮಾಜಿ ಸಚಿವ ಏಕಾಂತಯ್ಯ ಅವರು ತಮ್ಮ ಕೈ, ಬಾಯಿ ಶುದ್ಧವಾಗಿಟ್ಟುಕೊಂಡಿರುವ ಅಪರೂಪದ ವ್ಯಕ್ತಿ. ಜತೆಗೆ ಸರಳ ವ್ಯಕ್ತಿತ್ವದ, ಸಜ್ಜನ ರಾಜಕಾರಣಿ. ಸಮಾಜನಾದಿ ಚಿಂತನೆಗಳ ಮೈಗೂಡಿಸಿಕೊಂಡಿರುವ ಅವರಿಗೆ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ' ಎಂದು ಬಸವರಾಜ ಹೊರಟ್ಟಿ ನುಡಿದರು.
ಗೋಪಾಲಗೌಡ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ಏಕಾಂತಯ್ಯ ಅವರು, ‘ಇತ್ತೀಚಿನ ದಿನಗಳಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‍ನ ಚರ್ಚೆಗಳಲ್ಲಿ ಜನಪ್ರತಿನಿಧಿಗಳು ಭಾಗವಹಿಸದೆ ಇರುವುದಕ್ಕೆ ಬೇಸರ ತರಿಸಿದೆ. ಸಮಾಜವಾದಿ ಚಿಂತನೆಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ' ಎಂದು ಕರೆ ನೀಡಿದರು.
ಇದೇ ವೇಳೆ ಏಕಾಂತಯ್ಯ ಅವರಿಗೆ 25 ಸಾವಿರ ರೂ.ನಗದು ಒಳಗೊಂಡ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ಕಂಚಿನ ಫಲಕ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಕಸಾಪ ನಿಕಟಪೂರ್ವ ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ, ವೀರಣ್ಣ, ವಿನಯ್ ರಾಮೇಗೌಡ, ರಾಮಕೃಷ್ಣ, ಡಾ.ನಂಜುಂಡ, ರಂಗಪ್ಪ, ಪುಟ್ಟರಾಜು, ಲಕ್ಷ್ಮಿ ನರಸಿಂಹ ಸೇರಿ ಪದಾಧಿಕಾರಿಗಳು ಹಾಜರಿದ್ದರು.







