ಗೋವಾ ರಾಜ್ಯಪಾಲರನ್ನು ಭೇಟಿ ಮಾಡಿದ ವಿಶ್ವಜೀತ್ ರಾಣೆ: ಸಿಎಂ ಹುದ್ದೆ ಮೇಲೆ ಕಣ್ಣು ?

ಪಣಜಿ: ಗೋವಾ ಸಿಎಂ ಹುದ್ದೆಯ ಮೇಳೆ ಕಣ್ಣಿಟ್ಟಿರುವ ವಿಶ್ವಜೀತ್ ರಾಣೆ ಶನಿವಾರ ಸಂಜೆ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರನ್ನು ಭೇಟಿ ಮಾಡಿರುವುದು ಹಲವು ರಾಜಕೀಯ ಊಹಾಪೋಹಗಳಿಗೆ ಕಾರಣವಾಗಿದೆ. ಚುನಾಯಿತ ಬಿಜೆಪಿ ಶಾಸಕರಲ್ಲಿ ಭಿನ್ನಾಭಿಪ್ರಾಯ ಮತ್ತು ಬಣ ರಾಜಕೀಯ ತಲೆ ಎತ್ತಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ರಾಣೆ ಭೇಟಿ ಕುತೂಹಲ ಕೆರಳಿಸಿದೆ.
"ನನ್ನ ಭೇಟಿ ತೀರಾ ವೈಯಕ್ತಿಕವಾಗಿದ್ದು, ಕ್ಷೇತ್ರಕ್ಕೆ ರಾಜ್ಯಪಾಲರನ್ನು ಆಹ್ವಾನಿಸುವ ಮತ್ತು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವರ ಆಶೀರ್ವಾದ ಪಡೆಯುವ ಉದ್ದೇಶದಿಂದ ಭೇಟಿ ಮಾಡಿದ್ದೆ" ಎಂದು ರಾಣೆ ಹೇಳಿದ್ದಾರೆ.
"ಘನ ರಾಜ್ಯಪಾಲರನ್ನು ಭೇಟಿ ಮಾಡಿರುವುದು ವದಂತಿಗಳಿಗೆ ಕಾರಣವಾಗಿದೆ. ಆದರೆ ಇದು ವೈಯಕ್ತಿಕ ಭೇಟಿಯಾಗಿದ್ದು, ಪ್ರತಿಯೊಂದೂ ರಾಜಕೀಯವಲ್ಲ" ಎಂದು ರಾಣೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಭೇಟಿಯನ್ನು ಸ್ಥಳೀಯ ಮಾಧ್ಯಮ ಚಾನಲ್‍ಗಳು ಅನಗತ್ಯವಾಗಿ ರಾಜಕೀಯಗೊಳಿಸಲಾಗಿದೆ ಎಂದು ಅವರು ದೂಷಿಸಿದ್ದಾರೆ.
ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ಶೇಟ್ ತಾನಾವಾಡೆ ಅವರು ಕೂಡಾ ಈ ಭೇಟಿಗೆ ವಿಶೇಷ ಮಹತ್ವ ಕಲ್ಪಿಸಬೇಕಿಲ್ಲ ಎಂದು ಹೇಳಿದ್ದಾರೆ. ಸಿಎಂ ಹುದ್ದೆಗೆ ಎರಡು ಬಣಗಳ ನಡುವೆ ತೀವ್ರ ಲಾಬಿ ನಡೆದಿದ್ದು, ರಾಣೆ ಉನ್ನತ ಹುದ್ದೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ರಾಣೆಯವರು ರಾಜ್ಯಪಾಲರನ್ನು ಭೇಟಿ ಮಾಡಿದ ಬೆನ್ನಲ್ಲೇ ಸಾವಂತ್ ಬಿಜೆಪಿ ಶಾಸಕರ ಸಭೆ ಕರೆದಿದ್ದು, ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಸೂಚನೆ ನೀಡಿದ್ದಾರೆ. ಗೋವಾದ ಹೋಟೆಲ್‍ನಲ್ಲಿ ನಡೆದ ಸಭೆಯಲ್ಲಿ 17 ಶಾಸಕರು ಪಾಲ್ಗೊಂಡಿದ್ದಾರೆ ಎನ್ನಲಾಗಿದೆ.







