"ನಮ್ಮಲ್ಲಿ 700 ಶಾಸಕರಿದ್ದಾರೆ...": ಮಮತಾ ಬ್ಯಾನರ್ಜಿ ಟೀಕೆಗೆ ಕಾಂಗ್ರೆಸ್ ನಾಯಕ ತಿರುಗೇಟು
“ಬಿಜೆಪಿ ಮೆಚ್ಚಿಸಲು ಗೋವಾಕ್ಕೆ ಹೋಗಿ ಕಾಂಗ್ರೆಸ್ ದುರ್ಬಲಗೊಳಿಸಿದ್ದೀರಿ’’

ಕೋಲ್ಕತ್ತಾ: ಕಾಂಗ್ರೆಸ್ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿರುವ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಕ್ಷದ ಪಶ್ಚಿಮ ಬಂಗಾಳ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಅವರು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರನ್ನು ಬಿಜೆಪಿಯ ಏಜೆಂಟ್ ಎಂದು ಕರೆದಿದ್ದಾರೆ.
ಭಾರತದಾದ್ಯಂತ ಕಾಂಗ್ರೆಸ್ ಅಸ್ತಿತ್ವವನ್ನು ವಿವರಿಸಿದ ಅವರು, ಪ್ರತಿಪಕ್ಷಗಳ ಒಟ್ಟು ಮತಗಳ ಹಂಚಿಕೆಯಲ್ಲಿ ಶೇಕಡಾ 20 ರಷ್ಟು ಕಾಂಗ್ರೆಸ್ ಹೊಂದಿದೆ ಎಂದು ಹೇಳಿದ ಅವರು ರಾಜಕೀಯದಲ್ಲಿ ನಿಮ್ಮ ಪಕ್ಷ ಎಲ್ಲಿದೆ ತೃಣಮೂಲ ಮುಖ್ಯಸ್ಥರನ್ನು ಪ್ರಶ್ನಿಸಿದರು.
ಐದು ರಾಜ್ಯಗಳಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಶುಕ್ರವಾರ ಉಲ್ಲೇಖಿಸಿದ ಮಮತಾ ಬ್ಯಾನರ್ಜಿ, "ಬಿಜೆಪಿ ವಿರುದ್ಧ ಹೋರಾಡಲು ಬಯಸುವ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ನಡೆಯಬೇಕು. ಕಾಂಗ್ರೆಸ್ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಅನ್ನು ಅವಲಂಬಿಸುವುದರಲ್ಲಿ ಅರ್ಥವಿಲ್ಲ'' ಎಂದಿದ್ದರು.
ಭಾರತದಾದ್ಯಂತ ಕಾಂಗ್ರೆಸ್ ಪಕ್ಷದ ಅಸ್ತಿತ್ವವನ್ನು ಪ್ರಶ್ನಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿಯನ್ನು ಚೌಧರಿ ಟೀಕಿಸಿದರು.
"ಹುಚ್ಚುತನದ ವ್ಯಕ್ತಿಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಭಾರತದಾದ್ಯಂತ ಕಾಂಗ್ರೆಸ್ 700 ಶಾಸಕರನ್ನು ಹೊಂದಿದೆ. ಅದು ಮಮತಾ ಬಳಿ ಇದೆಯೇ? ಪ್ರತಿಪಕ್ಷಗಳ ಒಟ್ಟು ಮತ ಹಂಚಿಕೆಯ ಶೇಕಡಾ 20 ರಷ್ಟು ಕಾಂಗ್ರೆಸ್ ಹೊಂದಿದೆ. ಅದು ಅವರ ಬಳಿ ಇದೆಯೇ? ಅವರು ಬಿಜೆಪಿಯನ್ನು ಮೆಚ್ಚಿಸಲು ಹಾಗೂ ಅದರ ಏಜೆಂಟ್ ಆಗಿ ಕಾರ್ಯನಿರ್ವಹಿಸಲು ಈ ರೀತಿ ಹೇಳುತ್ತಿದ್ದಾರೆ. . ಅವರು ಪ್ರಚಾರದಲ್ಲಿರಲು ಈ ರೀತಿಯ ವಿಷಯಗಳನ್ನು ಹೇಳುತ್ತಾರೆ" ಎಂದು ಅವರು ಹೇಳಿದರು.
"ಕಾಂಗ್ರೆಸ್ ವಿರುದ್ಧ ಏಕೆ ಟೀಕೆ ಮಾಡುತ್ತಿದ್ದೀರಿ? ಕಾಂಗ್ರೆಸ್ ಇಲ್ಲದಿದ್ದರೆ ಮಮತಾ ಬ್ಯಾನರ್ಜಿಯಂತಹವರು ಹುಟ್ಟುತ್ತಿರಲಿಲ್ಲ. ಅವರು ಇದನ್ನು ನೆನಪಿಟ್ಟುಕೊಳ್ಳಬೇಕು. ಬಿಜೆಪಿಯನ್ನು ಮೆಚ್ಚಿಸಲು ಗೋವಾಕ್ಕೆ ಹೋದರು. ಕಾಂಗ್ರೆಸ್ ಸೋಲುವಂತೆ ಮಾಡಿದರು. ನೀವು ಗೋವಾದಲ್ಲಿ ಕಾಂಗ್ರೆಸ್ ಅನ್ನು ದುರ್ಬಲಗೊಳಿಸಿದ್ದೀರಿ, ಇದು ಎಲ್ಲರಿಗೂ ತಿಳಿದಿದೆ’’ ಎಂದು ಚೌಧರಿ ಹೇಳಿದರು.







