ಮುಂದಿನ ವಿಶ್ವಯುದ್ಧ ನಡೆದರೆ ಅದು ನೀರಿಗಾಗಿ ನಡೆದೀತು: ಡಾ. ಜಗದೀಶ್ ಬಾಳ
ಕೃಷಿ ಮೇಳದಲ್ಲಿ "ಜಲ ಸಂರಕ್ಷಣೆ" ವಿಚಾರಗೋಷ್ಠಿ

ಮಂಗಳೂರು, (ಕೊಲ್ನಾಡು) : ರಾಜ್ಯಮಟ್ಟದ ಕೃಷಿ ಮೇಳದ ಕೊನೆಯ ದಿನವಾದ ರವಿವಾರ ಬೆಳಗ್ಗೆ ಶ್ರೀ ರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ 'ಅದಾನಿ' ಪ್ರಾಯೋಜಿತ "ಜಲಸಂರಕ್ಷಣೆ" ವಿಚಾರಗೋಷ್ಠಿ ನಡೆಯಿತು. ಬಲ್ಮಠ ಸರಕಾರಿ ಮಹಿಳಾ ಕಾಲೇಜ್ ಇದರ ಪ್ರಾಂಶುಪಾಲರಾದ ಜಗದೀಶ್ ಬಾಳ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.
ಗೋಷ್ಠಿಯಲ್ಲಿ ಮಾತಾಡುತ್ತಾ, "ಮುಂದಿನ ದಿನಗಳಲ್ಲಿ ವಿಶ್ವಯುದ್ಧ ನಡೆದರೆ ಅದು ನೀರಿಗಾಗಿಯೇ ನಡೆದೀತು. ಯಾಕೆಂದರೆ ಬ್ಲೂ ಪ್ಲಾನೆಟ್ ಎಂದು ಕರೆಯಲ್ಪಡುವ ಭೂಮಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇಲ್ಲ. ಉಪ್ಪುನೀರಿನ ಪ್ರಮಾಣ ಹೆಚ್ಚಿದ್ದು ಅದನ್ನು ಬಳಸಲು ಸಾಧ್ಯವಿಲ್ಲ. 2.5% ಮಾತ್ರ ಸಿಹಿನೀರು ಇದ್ದು ಇದನ್ನು ಮನುಷ್ಯ ಮಾತ್ರವಲ್ಲ ಎಲ್ಲಾ ಪ್ರಾಣಿ ಪಕ್ಷಿಗಳು ಬಳಸಬೇಕು. ಹೀಗಾಗಿ ನೀರನ್ನು ಮಿತಿ ಮೀರಿ ಬಳಸಬಾರದು. ನೀರಿಗಾಗಿ ಈಗಾಗಲೇ ಗಲಾಟೆ ನಡೆಯುತ್ತಿದ್ದು ಗೋಧಿ, ಭತ್ತ ಬೆಳೆಯುವ ಭೂಮಿಯಲ್ಲಿ ನೀರಿನ ಅಭಾವ ಕಾಡುತ್ತಿದೆ. ಭೂಮಿ ಕೇವಲ ನೀರನ್ನು ಹಿಡಿದಿಡುವ ಪಾತ್ರೆ ಮಾತ್ರ. ಭೂಮಿಯ ಅಡಿಯಲ್ಲಿ ನೀರು ಉತ್ಪತ್ತಿಯಾಗುವುದಿಲ್ಲ. ಬೋರ್ ವೆಲ್ ನೀರು ಕುಡಿಯಲು ಯೋಗ್ಯವಲ್ಲ. ಯಾಕೆಂದರೆ ಭೂಮಿಯ ಅಡಿಯಲ್ಲಿ ಸಾವಿರಾರು ವರ್ಷಗಳ ಕಾಲ ಹಿಡಿದಿಟ್ಟ ನೀರು ಬೇಡವಾದ ಖನಿಜಗಳಿಂದ ಯುಕ್ತವಾಗಿದ್ದು ಅರೋಗ್ಯಕ್ಕೆ ಹಾನಿಕರವಾಗಿದೆ. ಬೆಂಗಳೂರಲ್ಲಿ ಕೆರೆ ಒತ್ತುವರಿ ಮಾಡಿ ಮೆಜೆಸ್ಟಿಕ್ ಬಸ್ ನಿಲ್ದಾಣ, ಸ್ಟೇಡಿಯಂ, ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಲಾಗಿದ್ದು ಅದರ ಪರಿಣಾಮ ಈಗಾಗಲೇ ನೋಡುತ್ತಿದ್ದೇವೆ. ಮುಲ್ಕಿ, ಸುರತ್ಕಲ್, ಮಂಗಳೂರಿನಲ್ಲಿ ಹಿಂದೆ ಸಾಕಷ್ಟು ಸಂಖ್ಯೆಯ ಕೆರೆಗಳಿತ್ತು ಆದರೆ ಈಗ ಕೆರೆಗಳು ಮಾಯವಾಗಿವೆ. ಅಸುಪಾಸಿನ ಕೈಗಾರಿಕೆಗಳು ನೀರಿಲ್ಲದೆ ಬೇಸಿಗೆಯಲ್ಲಿ ಬಂದ್ ಆಗುತ್ತಿವೆ. ಎಂ ಸಿ ಎಫ್, ಎಂ ಆರ್ ಪಿ ಎಲ್ ನಲ್ಲೂ ಇದೇ ಪರಿಸ್ಥಿತಿ. ಆದರೆ ಇದು ದೊಡ್ಡ ಸುದ್ದಿಯಾಗುವುದಿಲ್ಲ. ನೀರಿನ ಮೂಲ ಮರಗಳು. ಮಳೆ ಬರುವಾಗ ನಾವು ಮರದಡಿ ನಿಲ್ಲುತ್ತೇವೆ ಆದರೆ ಮಳೆ ನಿಂತ ಬಳಿಕ ಅದರಡಿ ನಿಂತರೆ ಹನಿಗಳಿಂದ ಒದ್ದೆಯಾಗುತ್ತೇವೆ. ಹಿಂದೆ ಮರ ಕಡಿಯಲು ಭಯ ಪಡುತ್ತಿದ್ದರು. ಭಟ್ರ ಬಳಿ ಕೇಳಿ ಅನುಮತಿ ಸಿಕ್ಕ ಮೇಲಷ್ಟೇ ಕಡಿಯುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ ಬೇಕಾಬಿಟ್ಟಿ ಮರ ಕಡಿಯಲಾಗುತ್ತದೆ. ನದಿಗಳು ಬರಿದಾಗುತ್ತಿವೆ. ಮಂಗಳೂರಿನಲ್ಲಿ ತ್ಯಾಜ್ಯ ನೀರು ಮರುಬಳಕೆ ಬಗ್ಗೆ ಭಾಷಣ ಬಿಗಿಯುತ್ತಾರೆ. ಆದರೆ ಅದು ಕೇವಲ ಬಾಯಿಮಾತಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.
ಎಕ್ಕಾರ್ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದಯಾಸಾಗರ್ ಪೂಂಜಾ, ಪುಷ್ಪ, ಪಿಡಿಒ ರಮೇಶ್ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.