ಮಹಿಳೆ ಸ್ವಾವಲಂಬಿಯಾದಲ್ಲಿ ಗ್ರಾಮಗಳ ಉದ್ದಾರ: ವಿನಯಕುಮಾರ್ ಸೊರಕೆ

ಕಾಪು : ಮಹಿಳೆ ರಾಷ್ಟ್ರದ ಶಕ್ತಿ. ಮಹಿಳೆಯರು ಸ್ವಾವಲಂಬಿಗಳಾದಲ್ಲಿ ಆರ್ಥಿಕವಾಗಿ ಸಧೃಢಗೊಳ್ಳುವುದರಿಂದ ಗ್ರಾಮಗಳ ಉದ್ಧಾರವಾಗುತ್ತದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅಭಿಪ್ರಾಯಪಟ್ಟರು.
ಅವರು ಶನಿವಾರ ಕಾಪು ವೀರಭದ್ರ ಸಭಾಭವನದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಟ್ರಸ್ಟ್ ಬೆಳಪು ಇದರ ದಶಮಾನೋತ್ಸವ ಸಮಾರಂಭ ಮತ್ತು ಮಹಿಳಾ ದಿನಾಚರಣೆಯ ಸಂದರ್ಭ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರ ಆರ್ಥಿಕ ಚಟುವಟಿಕೆಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಟ್ರಸ್ಟ್ ನಂತಹ ಸಮಾಜ ಸೇವಾ ಸಂಸ್ಥೆಯು ಪೂರಕವಾಗಿ ಬಲವನ್ನು ನೀಡುತ್ತಿದ್ದು, ಸ್ವ ಉದ್ಯೋಗದ ಜೊತೆಗೆ ಕೌಟುಂಬಿಕವಾಗಿ ಆರ್ಥಿಕ ಚೈತನ್ಯವನ್ನು ನೀಡಲಿದೆ.
ಈ ಸಮಾರಂಭದಲ್ಲಿ ದಶಮಾನೋತ್ಸವ ಸಂಭ್ರಮದ ವರದಿ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು. ಸ್ವಸಹಾಯ ಸಂಘದ ಮಹಿಳೆಯರಿಗೆ ಮತ್ತು ಅವರ ಮಕ್ಕಳಿಗೆ ನಡೆದಿದ್ದ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ವಯೋವೃದ್ಧರಿಗೆ ಸೀರೆಯನ್ನು ವಿತರಿಸಲಾಯಿತು.
ದೆಹಲಿಯ ಅಖಿಲ ಭಾರತ ಪಂಚಾಯತ್ ಪರಿಷದ್ ಕಾರ್ಯಾಧ್ಯಕ್ಷ ಡಾ. ಅಶೋಕ್ ಚೌಹಾಣ್, ಪ್ರಧಾನ ಕಾರ್ಯದರ್ಶಿ ಧ್ಯಾನ್ ಪಾಲ್ ಸಿಂಗ್, ಮಾಧ್ಯಮ ಮತ್ತು ಪ್ರಚಾರ ಸಲಹೆಗಾರ ಬದ್ರಿನಾಥ್ ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಟ್ರಸ್ಟ್ ಬೆಳಪು ಇದರ ಸ್ಥಾಪಕ ಅಧ್ಯಕ್ಷೆ ಜೇಬಾ ಸೆಲ್ವನ್ ಬೆಳಪು ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆನರಾ ಬ್ಯಾಂಕ್ ಡಿಜಿಎಂ ಲೀನಾ ಪಿಂಟೋ, ತಾಲ್ಲೂಕು ಪಂ. ಸದಸ್ಯೆ ಗೀತಾ ವಾಗ್ಲೆ, ಮಲ್ಲಾರು ಗ್ರಾಮ ಪಂ. ಮಾಜಿ ಅಧ್ಯಕ್ಷ ಸತೀಶ್ ಶೆಟ್ಟಿ, ಅಲ್ ರಿಹಾ ಸಹಕಾರಿ ಸೊಸೈಟಿ ಕಾಪು ಅಧ್ಯಕ್ಷ ಅಬ್ದುಲ್ಲಾ, ನ್ಯಾಯವಾದಿ ಪ್ರಜ್ವಲ್ ಎಸ್.ಶೆಟ್ಟಿ , ಪ್ರಮುಖರಾದ ಸೆಲ್ವನ್ ಚಾಲ್ರ್ಸ್, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಟ್ರಸ್ಟ್ ಸಿಬ್ಬಂದಿ ಸೌಮ್ಯಾ ಸ್ವಾಗತಿಸಿದರು. ಸಾಯಿರಾ ವರದಿ ನೀಡಿದರು. ಕಲಾವಿದೆ ಕುಸುಮಾ ಕಾಮತ್ ಮಿಮಿಕ್ರಿ ನಡೆಸಿದರು. ಸವಿತಾ ವಂದಿಸಿದರು. ನವೀನ್ ಕೊಪ್ಪ ಕಾರ್ಯಕ್ರಮ ನಿರೂಪಿಸಿದರು.