ಕೆರೆಕಾಡು ಸಾದಾತ್ ವಲಿ ಝಿಕ್ರ್ ಸ್ವಲಾತ್ ಮಜ್ಲಿಸ್ ವತಿಯಿಂದ ಉಚಿತ ಸಾಮೂಹಿಕ ವಿವಾಹ, ಮಜ್ಲಿಸುನ್ನೂರ್

ಮುಲ್ಕಿ, ಮಾ.13: ಇಲ್ಲಿಗೆ ಸಮೀಪದ ಕೆರೆಕಾಡು ಸಾದಾತ್ ವಲಿ ಝಿಕ್ರ್ ಸ್ವಲಾತ್ ಮಜ್ಲಿಸ್ ಟ್ರಸ್ಟ್ ವತಿಯಿಂದ 18ನೇ ವಾರ್ಷಿಕ ಉಚಿತ ಸಾಮೂಹಿಕ ವಿವಾಹ, ಮಜ್ಲಿಸುನ್ನೂರ್, ಸೈಯ್ಯದ್ ಹೈದರ ಅಲಿ ಶಿಹಾಬ್ ತಂಙಳ್ ಅವರ ಅನುಸ್ಮರಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ ಟ್ರಸ್ಟ್ ನ ವಠಾರದಲ್ಲಿ ರವಿವಾರ ಮರ್ಹೂಮ್ ಅಬ್ದುಲ್ ಜಬ್ಬಾರ್ ಉಪ್ಪಾಪ ವೇದಿಕೆಯಲ್ಲಿ ನಡೆಯಿತು.
ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 5 ಮಂದಿ ನವ ವಿವಾಹಿತರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಕ್ಕೂ ಮುನ್ನ ನಡೆದ ಮಜ್ಲಿಸುನ್ನೂರ್ ಕಾರ್ಯಕ್ರಮಕ್ಕೆ ಟ್ರಸ್ಟ್ ನ ಸಂಸ್ಥಾಪಕರಾದ ಮುಹಮ್ಮದ್ ಮದಾರಿ ಹಾಗೂ ಇಬ್ರಾಹೀಂ ಮುಸ್ಲಿಯಾರ್ ನೇತೃತ್ವ ನೀಡಿದರು. ಅಲ್ಲದೆ, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಹಾಗೂ ಯೆನೆಪೊಯ ಆಸ್ಪತ್ರೆ ರಕ್ತನಿಧಿ ದೇರಳಕಟ್ಟೆ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಎಸ್.ಬಿ. ದಾರಿಮಿ ಮುಲ್ಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೂರೇ ಅಜ್ಮೀರ್ ಖ್ಯಾತಿಯ ವಲಿಯುದ್ದೀನ್ ಪೈಝಿ ಅವರು ಹೈದರಲಿ ಶಿಹಾಬ್ ತಂಙಳ್ ಅವರ ಅನುಸ್ಮರಣೆ ಮಾಡಿದರು.
ನಿಖಾಹ್ ನೇತೃತ್ವವನ್ನು ಸಮಸ್ತ ಕೇರಳ ಜಂ ಇಯತುಲ್ ಉಲಮಾ ಕೇಂದ್ರ ಮುಷಾವರದ ಸದಸ್ಯ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಾಂಬ್ರಾಣ ವಹಿಸಿದ್ದರು. ಅಲ್ಹಾಜ್ ಅಝ್ಹರ್ ಫೈಝಿ ಬೊಳ್ಳೂರು ದುವಾ ನೇತೃತ್ವ ನೀಡಿದರು. ಎಸ್ಕೆ ಎಸ್ಸೆಸ್ಸೆಫ್ ಹಂಗಾಮಿ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಮುಖ್ಯ ಭಾಷಣಗೈದರು. ತೋಕೂರು ಜಾಮಿಅ ಮಸೀದಿಯ ಖತೀಬ್ ಮೌಲಾನಾ ಅಬ್ದುಲ್ ಖಾದಿರ್, ರಾಜ್ಯ ಕಾಂಗ್ರಸ್ ನಾಯಕ ಮಿಥುನ್ ರೈ, ಹಳೆಯಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಸಂತ್ ಬೆರ್ನಾರ್ಡ್, ಹಳೆಯಂಗಡಿ ವಲಯ ಮುಸ್ಲಿಂ ಜಮಾಅತ್ ಒಕ್ಕೂಟದ ಅಧ್ಯಕ್ಷ ಸಾಹುಲ್ ಹಮೀದ್ ಕದಿಕೆ, ನಂಡೆ ಪೆಂಙಲ್ ಅಭಿಯಾನದ ಸ್ಥಾಪಕಾಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ, ಇಕ್ಬಾಲ್ ಬಾಳಿಲ ಮೊದಲಾದವರು ಉಪಸ್ಥಿತರಿದ್ದರು.