ಯಕ್ಷಗಾನ ಸಂಘಗಳ ಡೈರೆಕ್ಟರಿಯ ಅಗತ್ಯವಿದೆ: ಜೋಶಿ

ಮಂಗಳೂರು : ದ.ಕ. ಜಿಲ್ಲೆಯ ಯಕ್ಷಗಾನ ತಾಳಮದ್ದಳೆ ಸಂಘಗಳ ಮಾಹಿತಿ ಸಂಗ್ರಹಣೆಯ ನಿಟ್ಟಿನಲ್ಲಿ ಡೈರೆಕ್ಟರಿಯನ್ನು ಹೊರತರುವ ಕೆಲಸ ಮಾಡಬೇಕು. ಇಂತಹ ದಾಖಲೀಕರಣದಿಂದ ಮುಂದಿನ ಪೀಳಿಗೆಗೆ ಸಂಘದ ಪರಿಚಯ ಮಾಡಲು ಸಾಧ್ಯವಾಗುತ್ತದೆ ಎಂದು ಹಿರಿಯ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ ಹೇಳಿದರು.
ಕರ್ನಾಟಕ ಯಕ್ಷಗಾನ ಅಕಾಡಮಿಯ ವತಿಯಿಂದ ನಗರದ ರಥಬೀದಿಯ ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ರವಿವಾರ ನಡೆದ ಶ್ರೀ ವಾಗೇಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಳಮದ್ದಳೆಯನ್ನು ಮೂಲ ಹಂತದಲ್ಲಿ ಕಲಿಯಬೇಕಾದರೆ ತಾಳಮದ್ದಳೆಗಳ ಸಂಘದಲ್ಲಿ ಸೇರಿಕೊಂಡು ಕಲಿಯಬೇಕು. ಯಕ್ಷಗಾನದಲ್ಲಿ ಬೆಳೆಯಬೇಕಾದರೆ ಇಂತಹ ಸಂಘದಲ್ಲಿ ಕಲಿತರೆ ಮಾತ್ರ ಅವರಿಗೆ ಯಕ್ಷಗಾನದ ಸಮಗ್ರ ಮಾಹಿತಿಯನ್ನು ಪ್ರೇಕ್ಷಕನಿಗೆ ನೀಡಲು ಸಾಧ್ಯವಿದೆ ಎಂದು ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.
ಶ್ರೀವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಗೌರವಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀಮಹಾಮಾಯಾ ದೇವಸ್ಥಾನದ ಆಡಳಿತ ಮೊಕ್ತೇಸರ ಸಿಎ ಶ್ರೀನಿವಾಸ ಕಾಮತ್ ಮಾತನಾಡಿದರು. ಹಿರಿಯ ತಾಳಮದ್ದಳೆ ಅರ್ಥಧಾರಿ ನಾಗೇಶ್ ಪ್ರಭು ಅವರನ್ನು ಸನ್ಮಾನಿಸಲಾಯಿತು. ದಿ.ಎನ್. ಮಾಧವ ಆಚಾರ್ಯ ಅವರ ಸಂಸ್ಮರಣೆ ನಡೆಯಿತು.
ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಕರ್ಕೆರಾ, ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಶ್ರೀವಾಗೀಶ್ವರಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಿ.ಎಸ್.ಭಂಡಾರಿ ಉಪಸ್ಥಿತರಿದ್ದರು.
ಸಂಜಯ ಕುಮಾರ್ ರಾವ್ ಸ್ವಾಗತಿಸಿದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.