ಕೆಲಿಂಜದಲ್ಲಿ ಸಮಸ್ತ ಪಬ್ಲಿಕ್ ಪರೀಕ್ಷೆ, ಮೌಲ್ಯಮಾಪನಕ್ಕೆ ನೂತನ ಕೇಂದ್ರ ಆರಂಭ

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಈ ವರ್ಷದ ಪಬ್ಲಿಕ್ ಪರೀಕ್ಷೆಗೆ ಮೊದಲ ಬಾರಿಗೆ ವಿಟ್ಲ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವ್ಯಾಪ್ತಿಗೊಳಪಟ್ಟ ಕೆಲಿಂಜ ಹಯಾತುಲ್ ಇಸ್ಲಾಂ ಮದ್ರಸವನ್ನು ಪಬ್ಲಿಕ್ ಪರೀಕ್ಷೆಯ ಹೊಸ ಡಿವಿಷನ್ ಕೇಂದ್ರವಾಗಿ ಆಯ್ಕೆ ಮಾಡಲಾಗಿದೆ.
ಅದರಂತೆ ಕೆಲಿಂಜ ಜಮಾಅತ್ ಅಧ್ಯಕ್ಷ ಕರೀಂ ಕಂಪದಬೈಲು ಅವರ ಅಧ್ಯಕ್ಷತೆಯಲ್ಲಿ ಪರೀಕ್ಷೆಯ ಪೂರ್ವ ಸಿದ್ಧತಾ ಮೇಲ್ವಿಚಾರಕರ ಮಾಹಿತಿ ಕಾರ್ಯಗಾರವು ನಡೆಯಿತು.
ಸ್ಥಳೀಯ ಖತೀಬ್ ಅಬ್ಬಾಸ್ ದಾರಿಮಿ ಕಾರ್ಯಾಗಾರ ಉದ್ಘಾಟಿಸಿದರು. ಸಮಸ್ತ ಮುಫತ್ತಿಶ್ ಜೆ.ಪಿ. ಮುಹಮ್ಮದ್ ದಾರಿಮಿ ವಿಷಯ ಮಂಡಿಸಿದರು. ಕೆಲಿಂಜ ಡಿವಿಷನ್ ವ್ಯಾಪ್ತಿಗೆ ಬರುವ ವಿಟ್ಲ, ಸಜಿಪ, ಕಲ್ಲಡ್ಕ ಸಾಲೆತ್ತೂರು, ಮಾಣಿ ರೇಂಜ್‌ಗಳ ಮುಖಂಡರಾದ ಅಬ್ದುಲ್ ಗಫೂರ್ ಹನೀಫಿ, ಇಸ್ಮಾಯಿಲ್ ಮದನಿ, ಶರೀಫ್ ಮದನಿ, ಯಹ್ಯಾ ದಾರಿಮಿ, ಸಿ.ಎಚ್. ಇಬ್ರಾಹಿಂ ಮುಸ್ಲಿಯಾರ್, ಅಬ್ದುಲ್ ಮಜೀದ್ ದಾರಿಮಿ, ಶರೀಫ್ ಮೂಸ ಕುದ್ದುಪದವು, ಎಂ.ಎಸ್.ಹಮೀದ್, ಅಬ್ದುಲ್ ಹಕೀಮ್ ಪರ್ತಿಪ್ಪಾಡಿ, ಶೆರೀಫ್ ಕೆಲಿಂಜ ಪಾಲ್ಗೊಂಡಿದ್ದರು.
ಮಾ.15,16 ಮೌಲ್ಯಮಾಪನ ಶಿಬಿರ: ದ.ಕ. ಜಿಲ್ಲಾ ಪ್ರಾಂತೀಯ ವಿಭಾಗದ ಉತ್ತರ ಪತ್ರಿಕೆಗಳ ಮೌಲ್ಯ ಮಾಪನಕ್ಕೆ ನೂತನವಾಗಿ ಅಸ್ತಿತ್ವಕ್ಕೆ ಬಂದ ಕೆಲಿಂಜ ಹಯಾತುಲ್ ಇಸ್ಲಾಂ, ಮಂಗಳೂರು ಅಝಹರಿಯ, ಕೃಷ್ಣಾಪುರ 8ಎ ಅಝೀಝಿಯ, ಮಿತ್ತಬೈಲು ಮುಹಿಯ್ಯುದ್ದೀನ್, ಕಲ್ಲೇಗ ಮಅದನುಲ್ ಉಲೂಮ್, ಉಪ್ಪಿನಂಗಡಿ ಮಠ ಖುವ್ವತುಲ್ ಇಸ್ಲಾಮ್ ಮದ್ರಸಗಳನ್ನು ನಿಗದಿಪಡಿಸಲಾಗಿದ್ದು, ಮಾ. 15,16ರಂದು ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ ಮೌಲ್ಯಮಾಪನ ಶಿಬಿರ ನಡೆಯಲಿದೆ. ಎಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನಕ್ಕೆ ಸಂಪೂರ್ಣ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ತಿಳಿಸಿದ್ದಾರೆ.