ಉತ್ತರಪ್ರದೇಶದ ಬಿಜೆಪಿ ಗೆಲುವಿನ ಹಿಂದೆ ಸುಳ್ಳು, ದ್ವೇಷಭಾಷಣವನ್ನು ಟ್ರೆಂಡ್ ಮಾಡುವ ಐಟಿ ಸೆಲ್ ನ ಅಪಪ್ರಚಾರ ಅಭಿಯಾನ
ಅಪಾಯಕಾರಿ ವ್ಯವಸ್ಥೆಯ ಕಾರ್ಯರೂಪವನ್ನು ಬಯಲಿಗೆಳೆದ Newslaundry.com

ಕಳೆದ ವರ್ಷದ ಮೇ ತಿಂಗಳಿನಲ್ಲಿ ತಮ್ಮ ಸಮುದಾಯದ ಮದುವೆ ಮೆರವಣಿಗೆಯನ್ನು ಸ್ಥಳೀಯ ಮುಸ್ಲಿಮರ ಗುಂಪು ತಡೆದಿದೆ ಎಂದು ಗ್ರಾಮದ ದಲಿತ ನಿವಾಸಿಗಳು ಆರೋಪಿಸುವುದರೊಂದಿಗೆ ಉತ್ತರ ಪ್ರದೇಶದ ನೂರಪುರ ಗ್ರಾಮವು ಸುದ್ದಿಯಲ್ಲಿತ್ತು. ಪ್ರದೇಶದಲ್ಲಿ ಸಶಸ್ತ್ರ ಪೊಲೀಸರನ್ನು ನಿಯೋಜಿಸುವಷ್ಟರ ಮಟ್ಟಿಗೆ ಸ್ಥಿತಿ ಉದ್ವಿಗ್ನಗೊಂಡಿತ್ತು.
ನೂರಪುರದಲ್ಲಿಯ ಪರಿಸ್ಥಿತಿಯನ್ನು ಶಾಂತಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದಾಗಲೇ #ನೂರಪುರ ಭೀಮ್ ಕೆ ದುಷ್ಮನ್ ಮೀಮ್ (ಮುಸ್ಲಿಮರು ನೂರಪುರದ ದಲಿತರ ಶತ್ರುಗಳಾಗಿದ್ದಾರೆ) ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ಕಾಣಿಸಿಕೊಂಡಿತ್ತು. ಈ ಹ್ಯಾಷ್ಟ್ಯಾಗ್ ನೊಂದಿಗೆ ಹರಿದಾಡಿದ್ದ ಸಂದೇಶಗಳು ನೂರಪುರದ ಮುಸ್ಲಿಮರು ದಲಿತ ವರ ಸಂಪ್ರದಾಯದಂತೆ ತನ್ನ ಮದುವೆಗೆ ಕುದುರೆಯ ಮೇಲೆ ಸಾಗಲು ಅವಕಾಶ ನೀಡಲಿಲ್ಲ ಎಂಬ ಅಪ್ಪಟ ಸುಳ್ಳನ್ನು ಪ್ರತಿಬಿಂಬಿಸಿದ್ದವು.
ಈ ಘಟನೆಗೆ ಎರಡು ತಿಂಗಳು ಮೊದಲು #ಭೀಮ್ ಮೀಮ್ ಧೋಖಾ ಹೈ (ದಲಿತ-ಮುಸ್ಲಿಮ್ ಮೈತ್ರಿ ಒಂದು ವಂಚನೆ) ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗತೊಡಗಿತ್ತು. ಹಿಂದುಗಳ ನಡುವೆ ಒಡಕನ್ನು ಸೃಷ್ಟಿಸಲು ದಲಿತರು ಮತ್ತು ಮುಸ್ಲಿಮರು ಕೈಜೋಡಿಸುತ್ತಿದ್ದಾರೆ ಎಂದು ಪ್ರತಿಪಾದಿಸಲಾಗಿತ್ತು. ನೂರಪುರದಲ್ಲಿ ಉದ್ವಿಗ್ನತೆ ಭುಗಿಲೇಳುವ ನಾಲ್ಕು ದಿನಗಳ ಮೊದಲು ಭಾರತದಲ್ಲಿ ಟ್ವಿಟರ್ ನ ಟ್ರೆಂಡಿಂಗ್ ವಿಷಯಗಳಲ್ಲಿ #HinduUniteAgainstZehad ಎಂಬ ಹ್ಯಾಷ್ ಟ್ಯಾಗ್ ಒಂದಾಗಿತ್ತು.



ಈ ಹ್ಯಾಷ್ ಟ್ಯಾಗ್ ಗಳು ಮತ್ತು ಆನ್ಲೈನ್ ಇಸ್ಲಾಮೋಫೋಬಿಯಾವನ್ನು ಉತ್ತೇಜಿಸುವ ಪ್ರಯತ್ನಗಳು ತನ್ನನ್ನು ‘ಸಾಮಾಜಿಕ ಮಾಧ್ಯಮ ಜಾಲ ’ಎಂದು ಬಣ್ಣಿಸಿಕೊಳ್ಳುವ ಪ್ರಶಾಸಕ ಸಮಿತಿ (ಪಿ.ಎಸ್)ಯ ಕೈವಾಡವಾಗಿದ್ದವು.
ಪಿಎಸ್ ನ ಆನ್‌ಲೈನ್ ಅವತಾರಗಳು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಟೆಲಿಗ್ರಾಮ್ ನಲ್ಲಿ ಹಲವಾರು ಗುಂಪುಗಳನ್ನು ಒಳಗೊಂಡಿದ್ದು, ಅವುಗಳಲ್ಲಿ 60,000ಕ್ಕೂ ಅಧಿಕ ಸದಸ್ಯರಿದ್ದಾರೆ. ವಾಟ್ಸ್ಆ್ಯಪ್ ನಲ್ಲಿ 2,500 ಗುಂಪುಗಳಿವೆ. ಟ್ವಿಟರ್ ನಲ್ಲಿ 21,300 ಜನರು, ‘ಕೂ’ನಲ್ಲಿ 60,000ಕ್ಕೂ ಅಧಿಕ ಜನರು ಮತ್ತು ಇನ್ಸ್ಟಾಗ್ರಾಮ್ ನಲ್ಲಿ 42,700 ಜನರು ಫಾಲೋ ಮಾಡುತ್ತಿದ್ದಾರೆ. ಒಟ್ಟು 25,000ಕ್ಕೂ ಅಧಿಕ ಚಂದಾದಾರರೊಂದಿಗೆ ಎರಡು ಯುಟ್ಯೂಬ್ ಚಾನೆಲ್ ಗಳ ಜೊತೆಗೆ ಎರಡು ಫೇಸ್ಬುಕ್ ಪೇಜ್ ಗಳೂ ಇದ್ದು,ಈ ಪೈಕಿ ಒಂದು 1,24,645 ಫಾಲೋವರ್ಗಳನ್ನು ಹೊಂದಿದೆ. ಪಿಎಸ್ ಈ ಎಲ್ಲ ಪ್ಲಾಟ್ ಫಾರ್ಮ್ ಗಳಲ್ಲಿ ಭಾರತೀಯ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಸುಳ್ಳುಸುದ್ದಿಗಳು ಮತ್ತು ದ್ವೇಷ ಭಾಷಣಗಳನ್ನು ಹರಡುತ್ತಿದೆ. ದ್ವೇಷ ಭಾಷಣಗಳನ್ನು ಟ್ರೆಂಡ್ ಮಾಡುತ್ತಿದೆ ‘ನಾವು ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ರಾಜಕೀಯ ಪಕ್ಷಗಳ ಪೈಕಿ ಬಿಜೆಪಿಯನ್ನು ಮಾತ್ರ ಬೆಂಬಲಿಸುತ್ತೇವೆ ’ಎಂದು ಪಿಎಸ್ ಮುಖ್ಯಸ್ಥ ಮನೀಷ್ ಭಾರದ್ವಾಜ್ ಹೇಳಿದರು.
‘ಬಿಜೆಪಿ ಎಂದೂ ಹಿಂದುತ್ವದ ವಿರುದ್ಧ ಹೆಜ್ಜೆಯಿರಿಸಿಲ್ಲ. ಬಿಜೆಪಿಯ ಹಲವರು ನಮ್ಮೆಂದಿಗೂ ಗುರುತಿಸಿಕೊಂಡಿದ್ದಾರೆ ’ ಎಂದು ಸಮಿತಿಯ ರಾಜಕೀಯ ಪಕ್ಷಪಾತಕ್ಕೆ ವಿವರಣೆಯಾಗಿ ಅವರು ಹೇಳಿದರು.
ಬಿಜೆಪಿ ನಾಯಕ ಕಪಿಲ್ ಮಿಶ್ರಾ ನೇತೃತ್ವದ 'Hindu Ecosystem' ಹೆಸರಿನ ಟೆಲಿಗ್ರಾಮ್ ಗುಂಪಿನ ಕುರಿತು ತನ್ನ ತನಿಖೆಯ ಸಂದರ್ಭ newslaundry ಮೊದಲ ಬಾರಿಗೆ ಪಿಎಸ್ ಅನ್ನು ತಲುಪಿತ್ತು. ಅದರ ಕೋರ್ ಸಮಿತಿಯು ತನ್ನ ಟೆಲಿಗ್ರಾಮ್ ಗುಂಪನ್ನು ಸ್ಥಾಪಿಸಲು ಮಿಶ್ರಾಗೆ ನೆರವಾಗಿತ್ತು.
2021ರಲ್ಲಿ ಟೆಲಿಗ್ರಾಮ್ ನಲ್ಲಿ ಪ್ರಕಾಶಕ ಸಮಿತಿಗೆ ಪ್ರವೇಶ ಪಡೆದಿದ್ದ ನಾವು ಅಲ್ಲಿಯೇ ಇದ್ದುಕೊಂಡು ಕಳೆದೊಂದು ವರ್ಷದಲ್ಲಿ ಅದರ ಮೇಲೆ ನಿಗಾಯಿರಿಸಿದ್ದೆವು. ನಮ್ಮ ತನಿಖೆಯ ಸಂದರ್ಭ ಪಿಎಸ್ ನ ಪ್ರಮುಖ ಸದಸ್ಯರೊಂದಿಗೆ ಮಾತನಾಡಲು ಮತ್ತು ತಪ್ಪುಮಾಹಿತಿಗಳನ್ನು ಹರಡಲು ಅದು ಹೇಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುತ್ತದೆ ಎನ್ನುವುದನ್ನು ನೋಡಲು ಸಾಧ್ಯವಾಗಿತ್ತು.
ಮಿಶ್ರಾರ ದ್ವೇಷದ ಕಾರ್ಖಾನೆ (ಟೆಲಿಗ್ರಾಮ್ ಗುಂಪು)ಯು 17,000 ಸದಸ್ಯರನ್ನು ಹೊಂದಿದ್ದರೆ, ಪಿಎಸ್ ಟೆಲಿಗ್ರಾಮ್ ನಲ್ಲಿ 60,000ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ, ಅದೂ ಕೇವಲ ಒಂದು ಗುಂಪಿನಲ್ಲಿ (ಪ್ರಶಾಸಕ ಸಮಿತಿ ಹೆಸರಿನ). ಈ ವರದಿಯನ್ನು ಸಿದ್ಧಗೊಳಿಸುತ್ತಿದ್ದಾಗ ಯಾವುದೇ ಸಮಯದಲ್ಲಿಯೂ ಪ್ರಶಾಸಕ ಸಮಿತಿ ಟೆಲಿಗ್ರಾಮ್ ಗುಂಪಿನಲ್ಲಿ ಸುಮಾರು 1.000 ಸದಸ್ಯರು ಸಕ್ರಿಯರಾಗಿರುತ್ತಿದ್ದರು.
ಪಿಎಸ್ ಟೆಲಿಗ್ರಾಮ್ ನಲ್ಲಿ 13,618 ಚಂದಾದಾರರೊಂದಿಗೆ ಹಿಂದಿ ಚಾನೆಲ್ ಒಂದನ್ನೂ ಹೊಂದಿದೆ. ತಮಿಳು, ಮರಾಠಿ, ಒರಿಯಾ, ಕನ್ನಡ ಮತ್ತು ಗುಜರಾತಿ ಭಾಷಿಕರಿಗಾಗಿ ಪ್ರತ್ಯೇಕ ಟೆಲಿಗ್ರಾಮ್ ಚಾನೆಲ್ ಗಳಿವೆ. ಟ್ವಿಟರ್ ಆರ್ಮಿ ಹೆಸರಿನ ಇನ್ನೊಂದು ಟೆಲಿಗ್ರಾಮ್ ಗ್ರೂಪ್ ಅನ್ನು ಸಹ ಪಿಎಸ್ ಹೊಂದಿದ್ದು, ಅದು ಟ್ವಿಟರ್‌ನಲ್ಲಿ ಹ್ಯಾಷ್ ಟ್ಯಾಗ್ಗಳನ್ನು ಟ್ರೆಂಡ್ ಮಾಡುವ ಹೊಣೆಗಾರಿಕೆಯನ್ನು ಹೊಂದಿದೆ.
ಪ್ರತಿ ವಾರ ಟ್ವಿಟರ್ನಲ್ಲಿ ಒಂದು ಹ್ಯಾಷ್ ಟ್ಯಾಗ್ ಅನ್ನು ಟ್ರೆಂಡ್ ಮಾಡುವುದು ಪಿಎಸ್ ನ ಗುರಿಯಾಗಿದೆ. ಈ ಲೇಖನವನ್ನು ಬರೆಯುವ ವೇಳೆ ಅದರ ಅಧಿಕೃತ ಟ್ವಿಟರ್ ಖಾತೆ (@OfficialTeamPs) ಬಿಜೆಪಿ,ಪಕ್ಷದ ಐಟಿ ಸೆಲ್,ಆರೆಸ್ಸೆಸ್ ಮತ್ತು ಬಜರಂಗ ದಳದ ಸದಸ್ಯರು ಸೇರಿದಂತೆ 21,600 ಫಾಲೋವರ್ ಗಳನ್ನು ಹೊಂದಿತ್ತು.
ಪಿಎಸ್ ಟ್ವಿಟರ್ ನಲ್ಲಿ ಕೇವಲ ಏಳು ಖಾತೆಗಳನ್ನು ಫಾಲೋ ಮಾಡುತ್ತಿದೆ. ರಾಷ್ಟ್ರಪತಿ, ಪ್ರಧಾನಿ ಕಚೇರಿ, ಗೃಹಸಚಿವರ ಕಚೇರಿ, ಉ.ಪ್ರ.ಮುಖ್ಯಮಂತ್ರಿ ಆದಿತ್ಯನಾಥ, ಹಿಂದು ಯುವ ವಾಹಿನಿಯ ಗುಜರಾತ್ ಉಸ್ತುವಾರಿ ದೇವನಾಥ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮತ್ತು ಆರೆಸ್ಸಸ್ ಗೆ ಈ ಖಾತೆಗಳು ಸೇರಿವೆ. ಟ್ವಿಟರ್ನಲ್ಲಿ ಪಿಎಸ್ ನ ಫಾಲೋವರ್ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕರಾದ ಪಿಯೂಷ್ ಗೋಯಲ್ ಮತ್ತು ಓಂ ಬಿರ್ಲಾ ಸೇರಿದ್ದಾರೆ.
ಪಿಎಸ್ ಎರಡು ಯುಟ್ಯೂಬ್ ಚಾನೆಲ್ ಗಳನ್ನು ಹೊಂದಿದ್ದು, ಈ ಲೇಖನ ಬರೆಯುತ್ತಿದ್ದ ಸಂದರ್ಭ ಒಂದು ಚಾನೆಲ್ 19,700 ಮತ್ತು ಇನ್ನೊಂದು 5,940 ಚಂದಾದಾರರನ್ನು ಹೊಂದಿದ್ದವು. ಸಾಮಾಜಿಕ ಮಾಧ್ಯಮ ವೇದಿಕೆ ‘ಕೂ’ದಲ್ಲಿಯೂ ಪಿಎಸ್ ಉಪಸ್ಥಿತಿಯನ್ನು ಹೊಂದಿದೆ. ಒಂದು ಹ್ಯಾಂಡಲ್ (@prashasaksamiti)58,000 ಮತ್ತು ಇನ್ನೊಂದು ಹ್ಯಾಂಡಲ್ (@PrashasakSamitiOfficial)ಸುಮಾರು 4,000 ಫಾಲೋವರ್ಗಳನ್ನು ಹೊಂದಿವೆ.
‘ಕೂ’ದಲ್ಲಿಯ ಇತ್ತೀಚಿನ ಪೋಸ್ಟ್ ಒಂದರಲ್ಲಿ ಮುಸ್ಲಿಮ್ ಮಹಿಳೆಯೋರ್ವಳು ಎಲ್ಲ ಹಿಂದು ಪುರುಷರಿಗೆ ಸವಾಲು ಹಾಕಿದ್ದಾಳೆ ಮತ್ತು ಇದಕ್ಕೆ ತಕ್ಕ ಉತ್ತರ ನೀಡಬೇಕು (ಹಿಂಸಾಚಾರ ಧ್ವನಿತವಾಗಿತ್ತು) ಎಂದು ಹೇಳಲಾಗಿದ್ದರೆ, ಇನ್ನೊಂದು ಪೋಸ್ಟ್ #boycott Daudwood ಹ್ಯಾಷ್ ಟ್ಯಾಗ್ ಹೊಂದಿದ್ದು, ಹಿಂದಿ ಚಿತ್ರೋದ್ಯಮವು ಹಿಂದುಧರ್ಮವನ್ನು ಅವಮಾನಿಸಲು ಸದಾ ಸಂಚು ಹೂಡುತ್ತಲೇ ಬಂದಿದೆ ಎಂದು ಪ್ರತಿಪಾದಿಸಲಾಗಿತ್ತು.
‘ನಾವು ಮುಸ್ಲಿಮರಿಗೆ ವಿರುದ್ಧವಾಗಿಲ್ಲ,ಆದರೆ ನಾವು ಸಿದ್ಧಾಂತದ ವಿರುದ್ಧವಾಗಿದ್ದೇವೆ’ ಎಂದ ಭಾರದ್ವಾಜ್,‘ಅವರಲ್ಲೋರ್ವ ವಿಭಿನ್ನ ಸಿದ್ಧಾಂತವನ್ನು ಹೊಂದಿದ್ದಾನೆ ಎಂದು ನಾವು ಖಚಿತವಾಗಿ ಹೇಳಲಾಗದು. ಒಂದು ವೇಳೆ ಹಾಗಿದ್ದರೂ ಆ ಒಬ್ಬ ವ್ಯಕ್ತಿಯನ್ನು ಕಂಡು ಹಿಡಿಯುವುದು ಹೇಗೆ ಎನ್ನುವುದು ನಮಗೆ ಗೊತ್ತಿಲ್ಲ, ಹೀಗಾಗಿ ಅವರು (ಮುಸ್ಲಿಮರು) ಸಂಪೂರ್ಣವಾಗಿ ತೊಲಗಬೇಕಿದೆ ’ಎಂದರು.
"ಎಚ್ಚೆತ್ತುಕೊಳ್ಳಿ ಮತ್ತು ಹಿಂದುತ್ವವನ್ನು ಆಘ್ರಾಣಿಸಿ"
ಭಾರದ್ವಾಜ್ ಪಿಎಸ್ ನಲ್ಲಿ ಮುಖ್ಯ ವ್ಯವಸ್ಥಾಪಕ ಸ್ಥಾನದಲ್ಲಿದ್ದು, ಪಿಎಸ್ ಜೊತೆ ಗುರುತಿಸಿಕೊಂಡಿರುವ ವಾಟ್ಸ್ಆ್ಯಪ್ ಗುಂಪುಗಳ ವಿಶೇಷ ಉಸ್ತುವಾರಿಯನ್ನು ಹೊಂದಿದ್ದಾರೆ. ವಾಟ್ಸ್ಆ್ಯಪ್ ನಲ್ಲಿ ಪಿಎಸ್ ‘ಶೃಂಖಲಾ(ಸರಪಳಿ)’ಎಂದು ಕರೆಯಲಾಗುವ 24 ‘ಮಾಸ್ಟರ್ ’ಗ್ರೂಪ್ ಗಳನ್ನು ಬಳಸಿ ತನ್ನ ಅಪಪ್ರಚಾರ ಅಭಿಯಾನವನ್ನು ನಡೆಸುತ್ತಿದೆ. ಈ ಶೃಂಖಲೆಗಳಿಗೆ ಭಗವಾ ಸೇನಾ, ಘರ್-ಘರ್ ಭಗವಾ, ಹಿಂದು ಸರಕಾರ, ಹಿಂದು ಸಾಮ್ರಾಜ್ಯ ಮತ್ತು ಜೈ ಹಿಂದುತ್ವದಂತಹ ಹೆಸರುಗಳನ್ನು ನೀಡಲಾಗಿದೆ.
ಪ್ರತಿ ಶೃಂಖಲೆಯೂ 100 ವಾಟ್ಸ್ಆ್ಯಪ್ ಗುಂಪುಗಳಿಂದ ರೂಪುಗೊಂಡಿದ್ದು, ಪ್ರತಿಯೊಂದೂ ಗುಂಪು 200ರಿಂದ 250 ಸದಸ್ಯರನ್ನು ಹೊಂದಿದೆ. ಅಂದರೆ ಕೇವಲ ವಾಟ್ಸ್ಆ್ಯಪ್ ಮೂಲಕವೇ ಪಿಎಸ್ ಸುಮಾರು 25,000 ಜನರನ್ನು ತಲುಪುತ್ತಿದೆ.
ಈ ಯಾವುದೇ ಗುಂಪುಗಳಿಗೆ ಸೇರಲು ಬಯಸುವವರು ಹಿಂದು ಆಗಿರಬೇಕು. ‘ಪ್ರಶಾಸಕ ಸಮಿತಿಯು ಸದಸ್ಯರನ್ನು ಬೌದ್ಧಿಕವಾಗಿ ಜಾಗ್ರತಗೊಳಿಸುತ್ತದೆ ಎಂದು ನಾವು ಅವರಿಗೆ (ಸದಸ್ಯರು) ಹೇಳುತ್ತೇವೆ. ಆದರೆ ಅವರು ತಳಮಟ್ಟದಲ್ಲಿ ಆರೆಸ್ಸೆಸ್, ವಿಹಿಂಪ, ಬಜರಂಗ ದಳ ಅಥವಾ ಇನ್ಯಾವುದೇ ಹಿಂದು ಸಂಘಟನೆಯನ್ನೂ ಸೇರಬೇಕಾಗುತ್ತದೆ’ ಎಂದು ಭಾರದ್ವಾಜ್ ತಿಳಿಸಿದರು.


ಪಿಎಸ್ ಅಥವಾ ಅದರ ಸಂಬಂಧಿತ ಗುಂಪುಗಳಿಗೆ ಮುಸ್ಲಿಮರು ಸೇರಲು ಅವಕಾಶವಿಲ್ಲ. ‘ಸನಾತನವನ್ನು ದ್ವೇಷಿಸುವವರು ನಮ್ಮವರಲ್ಲ ಮತ್ತು ಅವರು ಯಾರು ಎಂದು ನಿಮಗೆ ಗೊತ್ತಿದೆ ’ಎಂದು newslaundry.com ಜೊತೆ ಮಾತನಾಡುತ್ತಿದ್ದ ಭಾರದ್ವಾಜ್ ಹೇಳಿದರು. ಚಿರಂತನ ಎಂಬ ಅರ್ಥವನ್ನು ಹೊಂದಿರುವ ಸನಾತನ ಶಬ್ದವು ‘ಸನಾತನ ಧರ್ಮ ’ವನ್ನು ಸೂಚಿಸುತ್ತದೆ ಮತ್ತು ಹಲವಾರು ಹಿಂದು ನಾಯಕರು ಅದನ್ನು ಹಿಂದುಧರ್ಮಕ್ಕೆ ಸಮಾನಾರ್ಥಕವಾಗಿ ಬಳಸುತ್ತಾರೆ.
‘ಮುಸ್ಲಿಮರು ಮತ್ತು ಕ್ರೈಸ್ತರು ತಮ್ಮ ಧರ್ಮಗಳನ್ನು ತಿಳಿದುಕೊಂಡಿದ್ದಾರೆ. ಆದರೆ ಹಿಂದುಗಳು ಹಿಂದು ಧರ್ಮದಿಂದ ದೂರವಾಗಿದ್ದಾರೆ ಮತ್ತು ನಾವು ಅವರಲ್ಲಿ ಧರ್ಮದ ಬಗ್ಗೆ ತಿಳುವಳಿಕೆಯನ್ನು ಮೂಡಿಸುತ್ತಿದ್ದೇವೆ. ಸನಾತನಿ ಹಿಂದುಗಳು ಧರ್ಮದ ಅರಿವನ್ನು ಹೊಂದಿರುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಬೌದ್ಧರು, ಜೈನರು, ಸಿಕ್ಖರು ಇವರೆಲ್ಲ ಸನಾತನಿ ಹಿಂದುಗಳ ವ್ಯಾಪ್ತಿಯಲ್ಲಿ ಬರುತ್ತಾರೆ ’ಎಂದರು.
ಪಿಎಸ್ ನ ವೈರಲ್ ಹ್ಯಾಷ್ ಟ್ಯಾಗ್ ಗಳು ಮತ್ತು ಹಿಂಸಾಚಾರದ ಘಟನೆಗಳ ಕುತೂಹಲಕಾರಿ ಏಕಕಾಲಿಕತೆ ಇದ್ದರೂ ಭಾರದ್ವಾಜ್ ಮಾತ್ರ, ‘ಆಫ್ಲೈನ್ ಹಿಂಸಾಚಾರವನ್ನು ಪ್ರಚೋದಿಸುವುದು ಪಿಎಸ್ ನ ಉದ್ದೇಶವಲ್ಲ. ಜನರು ಬೀದಿಗಿಳಿದು ದಂಗೆಯೇಳುವಂತೆ ಉತ್ತೇಜಿಸುವುದು ನಮ್ಮ ಉದ್ದೆೀಶವಲ್ಲ. ಆದರೆ ಅವರು ಸ್ವಯಂರಕ್ಷಣೆಗಾಗಿ ಎಚ್ಚೆತ್ತುಕೊಳ್ಳಲೇಬೇಕಿದೆ ’ ಎಂದರು.
ಫೇಸ್ಬುಕ್ ನಲ್ಲಿ ಪಿಎಸ್ ಎರಡು ಪೇಜ್ ಗಳು ಮತ್ತು ಎರಡು ಖಾತೆಗಳನ್ನು ಹೊಂದಿದೆ. ಸಂಘಟಿತ ಹಿಂದು ಹೆಸರಿನ ಒಂದು ಪೇಜ್ 1,25,645 ಫಾಲೋವರ್ಗಳನ್ನು ಹೊಂದಿದೆ. ಅಷ್ಟು ಜನಪ್ರಿಯವಲ್ಲದ ಪ್ರಶಾಸಕ ಸಮಿತಿ ಪೇಜ್ ಗೆ 39,097 ಫಾಲೋವರ್ಗಳಿದ್ದಾರೆ.
‘ನಿಷ್ಪಕ್ಷ ರಾಜನೀತಿ(ಪ್ರಶಾಸಕ ಸಮಿತಿ)’ ಮತ್ತು ‘ಸಂಘಟಿತ ಹಿಂದು(ಪ್ರಶಾಸಕ ಸಮಿತಿ)’ ಇವು ಎರಡು ಫೇಸ್ಬುಕ್ ಗುಂಪುಗಳಾಗಿದ್ದು, ಅನುಕ್ರಮವಾಗಿ 5,400 ಮತ್ತು 36,100 ಸದಸ್ಯರನ್ನು ಹೊಂದಿವೆ.
ಸುಮಾರು 42,700 ಜನರು ಇನ್ಸ್ಟಾಗ್ರಾಮ್(@prashasaksamitiofficial) ನಲ್ಲಿ ಪಿಎಸ್ ಅನ್ನು ಫಾಲೋ ಮಾಡುತ್ತಿದ್ದಾರೆ. ಅವರ ಪ್ರೊಫೈಲ್ ‘ಜೈ ಶ್ರೀರಾಮ’ಘೋಷಣೆಯನ್ನು ಒಳಗೊಂಡಿದ್ದು, ಸ್ವವಿವರದ ಬದಲಿಗೆ ‘ಇನ್ಸ್ಟಾಗ್ರಾಮ್ ಪರ್ ಭಗವಾ ಫಹರಾನಾ ಹೈ (ಇನಸ್ಟಾಗ್ರಾಮ್ನಲ್ಲಿ ಭಗವಾ ಧ್ವಜವನ್ನು ಹಾರಿಸಬೇಕಿದೆ) ಎಂಬ ಒಕ್ಕಣೆಯನ್ನು ಹೊಂದಿದೆ. ಪಿಎಸ್ ನ ಎರಡು ಯುಟ್ಯೂಬ್ ಚಾನೆಲ್ಗಳು ‘ಥೂಕ್ ಜಿಹಾದ್’ನಂತಹ ಪಿತೂರಿ ಸಿದ್ಧಾಂತಗಳನ್ನು ಹರಡಲು ಮತ್ತು ಆಧಾರರಹಿತ ಆರೋಪಗಳನ್ನು ಮಾಡಲು ಒಪಿ ಇಂಡಿಯಾ ಮತ್ತು ಸುದರ್ಶನ ಟಿವಿಯಂತಹ ಅವಿಶ್ವಸನೀಯ ಮಾಧ್ಯಮಗಳಿಂದ ಪಡೆದ ಮಾಹಿತಿಗಳನ್ನು ಅವಲಂಬಿಸಿಕೊಂಡಿವೆ.
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಬಾಲಿವುಡ್ ನಟರಾದ ಆಮಿರ್ ಖಾನ್ ಮತ್ತು ಶಾರುಕ್ ಖಾನ್ ರಂತಹ ಮುಸ್ಲಿಂ ಸೆಲೆಬ್ರಿಟಿಗಳು ಪಿಎಸ್ ನ ವೀಡಿಯೊಗಳಲ್ಲಿ ದಾಳಿಗೆ ಒಳಗಾಗಿದ್ದಾರೆ. ಕ್ರೈಸ್ತ ಸಮುದಾಯದ ಗಣ್ಯರೂ ಇದರಿಂದ ಹೊರತಾಗಿಲ್ಲ. ಬಿಜೆಪಿಯ ಐಟಿ ಸೆಲ್ ನ ಭಾಗವಾಗಿರುವ ಇಂದೋರಿನ ಪ್ರದೀಪ ಮಾಹೌರ್ ಪಿಎಸ್ ನ ಯೂಟ್ಯೂಬ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಿಎಸ್ ನ ಕಾರ್ಯದ ಬಗ್ಗೆ ವಿವರಿಸುವಾಗ ಭಾರದ್ವಾಜ್,‘ಸಮಾಜದಲ್ಲಿ ಏನಾಗುತ್ತಿದೆ ಮತ್ತು ತಮ್ಮನ್ನು ರಕ್ಷಿಸಿಕೊಳ್ಳಲು ಹೇಗೆ ಸಿದ್ಧರಾಗಿರಬೇಕು ಎನ್ನುವುದನ್ನು ನಾವು ಅವರಿಗೆ (ಹಿಂದುಗಳು) ತಿಳಿಸುತ್ತೇವೆ ’ ಎಂದರು.
ಪ್ರಶಾಸಕ ಸಮಿತಿಯ ಒಳನೋಟ
ಪ್ರಶಾಸಕ ಸಮಿತಿಯಲ್ಲಿ ಭಾರದ್ವಾಜ್ ಹೇಳುವಂತೆ ಆರೇಳು ವರ್ಷಗಳ ಹಿಂದೆ ಸತ್ಯನಾರಾಯಣ ಸೋನಿ, ಕಮಲ್ ಗೋಸ್ವಾಮಿ, ಪ್ರವೀಣ ತಿವಾರಿ ಮತ್ತು ಕೋಮಲ್ ರಾಜ್ ಗೋಚಾರ್ ಅವರು ವಾಟ್ಸ್ಆ್ಯಪ್ ಗುಂಪನ್ನಾಗಿ ಪಿಎಸ್ ಅನ್ನು ಸ್ಥಾಪಿಸಿದ್ದರು. ಈ ನಾಲ್ವರೂ ಆನ್‌ಲೈನ್‌ನಲ್ಲಿ ಭೇಟಿಯಾಗಿದ್ದರು.
ಪ್ರಸ್ತುತ ಮುಖ್ಯ ವ್ಯವಸ್ಥಾಪಕರಾಗಿರುವ ಭಾರದ್ವಾಜ್, ಪಿಎಸ್ ನ ಸಂಘಟನಾತ್ಮಕ ಪಿರಮಿಡ್ ನ ಅಗ್ರಸ್ಥಾನದಲ್ಲಿದ್ದಾರೆ. ಸಾಮಾನ್ಯವಾಗಿ ಐದರಿಂದ ಏಳು ಸದಸ್ಯರನ್ನು ಹೊಂದಿರುವ ಕೋರ್ ಸಮಿತಿಯೊಂದು ಅವರಿಗೆ ನೆರವಾಗುತ್ತದೆ. ಒಟ್ಟಾರೆಯಾಗಿ ಪಿಎಸ್ ನಲ್ಲಿ ಭಾರದ್ವಾಜ್ ತನ್ನ ಕೈಕೆಳಗೆ 900ಕ್ಕೂ ಅಧಿಕ ಜನರನ್ನು ಹೊಂದಿದ್ದಾರೆ. ಸಮಾಂತರವಾಗಿ ವೃತ್ತಿಯಿಂದ ಅಕೌಂಟಂಟ್ ಆಗಿರುವ ಭಾರದ್ವಾಜ್ ಮುಂಬೈ ನಿವಾಸಿಯಾಗಿದ್ದಾರೆ.
ಪಿಎಸ್ ಜೊತೆ ಗುರುತಿಸಿಕೊಂಡಿರುವ ಪ್ರತಿಯೊಬ್ಬರಂತೆ ಅವರೂ ಹಿಂದುತ್ವಪರ ಸಿದ್ಧಾಂತದಿಂದ ಪ್ರೇರಣೆಗೊಂಡು ಜನಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನಾಲ್ವರು ಸ್ಥಾಪಕರ ಪೈಕಿ ಮೂವರು ಪಿಎಸ್ಗಾಗಿ ಕೆಲಸವನ್ನು ಮುಂದುವರಿಸಿದ್ದಾರೆ. ರಾಜಸ್ಥಾನದ ಚಿತ್ತೋಡಗಡ ನಿವಾಸಿಯಾಗಿರುವ ಸೋನಿ ಈಗ ಪಿಎಸ್ ನ ಮುಖ್ಯ ಪ್ರಶಾಸಕ (ಮುಖ್ಯ ಆಡಳಿತಗಾರ)ರಾಗಿದ್ದಾರೆ. ಪುಣೆ ನಿವಾಸಿ ತಿವಾರಿ ವರ್ಷಿತ (ಹಿರಿಯ) ನಿರ್ದೇಶಕರಾಗಿದ್ದರೆ, ಚಿತ್ತೋಡಗಡದ ಸಿಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಗೋಸ್ವಾಮಿ ಕೋರ್ ಸಮಿತಿಯ ಸದಸ್ಯರಾಗಿದ್ದಾರೆ. ಗೋಚಾರ್ ಪಿಎಸ್ನಿಂದ ಪ್ರತ್ಯೇಕಗೊಂಡಿದ್ದು,ಅದರದೇ ಮಾದರಿಯಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಹುಟ್ಟುಹಾಕಿದ್ದಾರೆ.
ಐವರು ಸಲಹೆಗಾರರು, 25 ವ್ಯವಸ್ಥಾಪಕರು ಮತ್ತು 25 ಪ್ರಬಂಧಕರು ಮುಖ್ಯ ವ್ಯವಸ್ಥಾಪಕರಿಗೆ ನೆರವಾಗುತ್ತಾರೆ. ನಂತರದಲ್ಲಿ ಬರುವ ಸಂಚಾಲಕರು ತಲಾ 20 ವಾಟ್ಸ್ಆ್ಯಪ್ ಗುಂಪುಗಳಿಗೆ ಜವಾಬ್ದಾರರಾಗಿದ್ದಾರೆ ಮತ್ತು ಪ್ರಸಾರಣ ಮಂತ್ರಿಗಳು ತಲಾ 10 ಗುಂಪುಗಳನ್ನು ನಿರ್ವಹಿಸುತ್ತಾರೆ. ಅಂತಿಮವಾಗಿ ಪಂಚ ಸಂಚಾಲಕ(ಗ್ರೂಪ್ ಅಡ್ಮಿನ್)ಗಳು ಮತ್ತು 800-900 ಸಮನ್ವಯಕಾರರ ತಂಡವಿದ್ದು,ಅವರು ಪಿಎಸ್ನ ಹ್ಯಾಷ್ ಟ್ಯಾಗ್ ಗಳನ್ನು ಟ್ವಿಟರ್ನಲ್ಲಿ ಟ್ರೆಂಡ್ ಆಗಿಸುವ ಹೊಣೆಯನ್ನು ಹೊತ್ತಿದ್ದಾರೆ. ಪ್ರತಿ ತಿಂಗಳು ಸದಸ್ಯತ್ವ ಅಭಿಯಾನವೂ ನಡೆಯುತ್ತದೆ.
ಪಿಎಸ್ಗೆ ಸೇರುವ ಆಕಾಂಕ್ಷಿಗಳು ಸಂದರ್ಶನ ಪ್ರಕ್ರಿಯೆಯನ್ನು ಎದುರಿಸಬೇಕಾಗುತ್ತದೆ. ಈ ನೆಟ್ವರ್ಕ್ಗೆ ಸೇರಲು ತನಗೆ ಸಾಧ್ಯವಾಗಿದ್ದು ಹೇಗೆ ಎನ್ನುವುದನ್ನು newslaundryಗೆ ವಿವರಿಸಿದ ಮಧ್ಯಪ್ರದೇಶದ ಗುನಾ ನಿವಾಸಿ ಅಜಯ್ ರಜಾಕ್ ಅವರು,‘ವಾಟ್ಸ್ಆ್ಯಪ್ ಗುಂಪೊಂದರಲ್ಲಿ ಪಿಎಸ್ ನ ಪೋಸ್ಟ್ ನೋಡಿದ ಬಳಿಕ ನಾನು ಅದನ್ನು ಇಷ್ಟಪಟ್ಟಿದ್ದೆ ಮತ್ತು ಅವರನ್ನು ಸೇರಲು ಲಿಂಕ್ ಒಂದನ್ನು ಅದು ಹೊಂದಿತ್ತು ಮತ್ತು ನಾನದನ್ನು ಕ್ಲಿಕ್ ಮಾಡಿದ್ದೆ.
ವ್ಯಕ್ತಿಯನ್ನು ನಂಬಬಹುದೇ ಎನ್ನುವುದನ್ನು ಅವರು ದೃಢಪಡಿಸಿಕೊಳ್ಳುತ್ತಾರೆ. ಬಳಿಕ ಸಂದರ್ಶನವೊಂದನ್ನು ನಡೆಸಲಾಗುತ್ತದೆ. ನೀವು ಆರೆಸ್ಸೆಸ್ ಅಥವಾ ಬಜರಂಗ ದಳದಂತಹ ಯಾವುದೇ ಹಿಂದು ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದೀರಾ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ನಿಮಗೆ ಆಸಕ್ತಿಯಿದೆಯೇ ಎಂದು ನನ್ನನ್ನು ಪ್ರಶ್ನಿಸಲಾಗಿತ್ತು. ವ್ಯಕ್ತಿಯು ಜಿಹಾದಿ, ಎಡಪಂಥೀಯ ಅಥವಾ ಜಾತ್ಯತೀತವಾದಿ ಅಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಅವರು ನಿಮ್ಮ ಟ್ವಿಟರ್ ಹ್ಯಾಂಡಲ್, ಫೇಸ್ಬುಕ್ ಇತ್ಯಾದಿಗಳನ್ನೂ ಪರಿಶೀಲಿಸುತ್ತಾರೆ ’ಎಂದು ತಿಳಿಸಿದರು.
ಒಂದು ವರ್ಷದ ಹಿಂದೆ ಪಂಚ ಸಂಚಾಲಕರಾಗಿ ಪಿಎಸ್ ಗೆ ಸೇರ್ಪಡೆಗೊಂಡಿದ್ದ ರಜಾಕ್, ಐದು ವಾಟ್ಸ್ಆ್ಯಪ್ ಗುಂಪುಗಳ ಉಸ್ತುವಾರಿಯನ್ನು ಹೊಂದಿದ್ದರು. ಬಳಿಕ ಪ್ರಸಾರಣ ಮಂತ್ರಿಯಾಗಿದ್ದು, ಮುಖ್ಯ ವ್ಯವಸ್ಥಾಪಕರ ಸಂದೇಶಗಳನ್ನು ರವಾನಿಸುವುದು ಅವರ ಕೆಲಸವಾಗಿತ್ತು. ಈಗ ಅವರು ವ್ಯವಸ್ಥಾಪಕರಾಗಿದ್ದು 100 ಗುಂಪುಗಳ ಮೇಲ್ವಿಚಾರಣೆಯನ್ನು ಹೊಂದಿದ್ದಾರೆ.
ಸುಳ್ಳು ಸುದ್ದಿಗಳ ಮೇಲೆಯೇ ನಿರ್ಮಿತಗೊಂಡಿರುವ ಸಿದ್ಧಾಂತ
ಪಿಎಸ್ ತನ್ನ ಹಿಂದು ಫಾಲೋವರ್ಗಳಿಗೆ ಸತ್ಯದರ್ಶನವನ್ನು ಮಾಡಿಸುತ್ತಿದೆ ಎಂದು ಭಾರದ್ವಾಜ್ ಹೇಳಿಕೊಂಡಿದ್ದರೂ ಅದು ಹಂಚಿಕೊಂಡಿರುವ ಸುಳ್ಳು ಸುದ್ದಿಗಳ ಪ್ರಮಾಣ ದಿಗ್ಭ್ರಮೆಯನ್ನು ಮೂಡಿಸುತ್ತದೆ. ಉದಾಹರಣೆಗೆ, ಟೆಲಿಗ್ರಾಮ್‌ನಲ್ಲಿ ಪಿಎಸ್ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಪುತ್ರಿ ರೆಯಾ ಖಾನ್ ನಟ ಪ್ರದೀಪ್ ಮೌರ್ಯ ಅವರನ್ನು ಮದುವೆಯಾಗಿದ್ದು ಮಾತ್ರವಲ್ಲ, ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಳು ಮತ್ತು ಇಸ್ಲಾಂ ಅನ್ನು ಹೀಗಳೆದಿದ್ದಳು ಎಂದು ತನ್ನ ಫಾಲೋವರ್‌ಗಳಿಗೆ ತಿಳಿಸಿತ್ತು. ಹೆಚ್ಚಾಗಿ ಹೇಳುವ ಅಗತ್ಯವಿಲ್ಲ,ಇದರ ಪ್ರತಿ ಭಾಗವೂ ಸುಳ್ಳುಸುದ್ದಿಯೇ
ಸತ್ಯ ಶೋಧನೆಯು ಪಿಎಸ್ ಮತ್ತು ಅದರ ಅಡ್ಮಿನ್ಗಳ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಸುಳ್ಳು ಎಂದು ಸಾಬೀತಾಗಿದ್ದರೂ ಪಿಎಸ್ ಮುಸ್ಲಿಮ್ ವ್ಯಕ್ತಿಯೋರ್ವ ಪಾತ್ರೆಯಿಂದ ಬಿರ್ಯಾನಿಯನ್ನು ಹೊರತೆಗೆಯುತ್ತಿದ್ದ ಚಿತ್ರವನ್ನು ತೋರಿಸಿತ್ತು ಮತ್ತು ಕೊಯಮತ್ತೂರಿನ ಹೋಟೆಲ್ವೊಂದರಲ್ಲಿ ಹಿಂದುಗಳಿಗಾಗಿ ಆಹಾರ ತಯಾರಿಕೆಗೆ ಹೇಗೆ ಬೇರೆಯೇ ಪಾತ್ರೆಗಳನ್ನು ಬಳಸಲಾಗುತ್ತದೆ ಎನ್ನುವುದಕ್ಕೆ ಇದು ಪುರಾವೆಯಾಗಿದೆ ಎಂದು ಪ್ರತಿಪಾದಿಸಿತ್ತು. ಆಹಾರದಲ್ಲಿ ಔಷಧಿಯನ್ನು ಬೆರೆಸಲಾಗಿದ್ದು,ಅದನ್ನು ಸೇವಿಸಿದ ಎಲ್ಲರೂ,ಅಂದರೆ ಹಿಂದುಗಳು ಷಂಡರಾಗುತ್ತಾರೆ ಎಂದೂ ಪಿಎಸ್ ಆರೋಪಿಸಿತ್ತು.



ಹಿಂದುಗಳು ‘ಜಿಹಾದಿ ವೈರಸ್’ನ ಸೋಂಕಿಗೆ ತುತ್ತಾಗಬಹುದಾದ ಮನೆಗಳು, ಹೋಟೆಲ್ಗಳು, ಧಾಬಾಗಳು ಮತ್ತು ಇತರ ಸ್ಥಳಗಳನ್ನು ಬಹಿಷ್ಕರಿಸಬೇಕು ಎಂದ�







