ಉಳ್ಳಾಲ: ʼಗ್ರೀನ್ಸ್ ಫೀಲ್ಡ್ʼ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ

ಉಳ್ಳಾಲ: ಇಲ್ಲಿನ ಸುಭಾಷ್ ನಗರದಲ್ಲಿ ನಿರ್ಮಾಣವಾಗಿರುವ ʼಗ್ರೀನ್ಸ್ ಫೀಲ್ಡ್ʼ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸುಸಜ್ಜಿತವಾಗಿ ನಿರ್ಮಿಸಲಾದ ಫುಟ್ ಬಾಲ್, ಕ್ರಿಕೆಟ್ ಪಂದ್ಯಾಟದ ಒಳಾಂಗಣ ಕ್ರೀಡಾಂಗಣದ ಉದ್ಘಾಟನೆ ಕಾರ್ಯಕ್ರಮ ರವಿವಾರ ನಡೆಯಿತು.
ಶಾಸಕ ಯುಟಿ ಖಾದರ್ ಅವರು ಕ್ರೀಡಾಂಗಣವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಯುವಕರಿಗೆ, ಆಟಗಾರರಿಗೆ ಅನುಕೂಲ ಆಗುವ ರೀತಿಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಆಗಿದ್ದು ಶ್ಲಾಘನೀಯ. ಇದು ಊರಿನ ಕ್ರೀಡಾಂಗಣವಾಗಿದ್ದು, ಇದರ ಪ್ರಯೋಜನ ಎಲ್ಲರಿಗೂ ಸಿಗಲಿ ಎಂದು ಶುಭ ಹಾರೈಸಿದರು.
ಡೈಜಿವಲ್ಡ್ ಎಂಡಿ ವಾಲ್ಟರ್ ನಂದಳಿಕೆ ಮಾತನಾಡಿ, ಉಳ್ಳಾಲ ಕ್ರೀಡೆಗೆ ಪ್ರಸಿದ್ಧಿ ಪಡೆದಿದೆ. ದ.ಕ. ಜಿಲ್ಲೆಯಲ್ಲಿ ಫುಟ್ ಬಾಲ್ ಆಟದ ಪ್ರತಿಭಾವಂತರು ಇದ್ದಾರೆ. ಅವರಿಗೆ ಇಂತಹ ಕ್ರೀಡಾಂಗಣ ಉಪಯೋಗಕ್ಕೆ ಬರಲಿ ಎಂದು ಶುಭ ಹಾರೈಸಿದರು.
ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮಾತನಾಡಿ, ಉಳ್ಳಾಲದಲ್ಲಿ ಕ್ರೀಡೆಗೆ ಪ್ರೋತ್ಸಾಹ ಹೆಚ್ಚು ನೀಡಲಾಗುತ್ತದೆ. ಕೋಚಿಂಗ್ ನೀಡುವವರು ಕೂಡ ಇಲ್ಲಿದ್ದಾರೆ. ಇದೀಗ ಆಟಗಾರರಿಗೆ ಕ್ರೀಡಾಂಗಣದ ವ್ಯವಸ್ಥೆ ಆಗಿದೆ. ಇದು ಉಳ್ಳಾಲಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಇನಾಯತ್ ಅಲಿ ಮುಲ್ಕಿ, ಉಳ್ಳಾಲ ನಗರ ಸಭೆ ಕೌನ್ಸಿಲರ್ ಖಲೀಲ್, ಗ್ರೀನ್ಸ್ ಫೀಲ್ಡ್ ಮಾಲಕ ಹಾರೂನ್ ರಶೀದ್, ಬ್ಲೂ ಲೈನ್ ಫುಡ್ಸ್ ಮಾಲಕ ಶೌಕತ್, ಎ.ಕೆ. ಸಮೂಹ ಸಂಸ್ಥೆಯ ಪಾಲುದಾರ ಅಬ್ದುಲ್ ರಝಾಕ್, ಸಾಜಿದ್ ಉಳ್ಳಾಲ ಹಾಗು ಇತರರು ಉಪಸ್ಥಿತರಿದ್ದರು.