ಉಪ್ಪಿನಂಗಡಿ: ಟೆಂಪೋ ಢಿಕ್ಕಿ; ದ್ವಿಚಕ್ರ ವಾಹನ ಸವಾರನಿಗೆ ಗಾಯ

ಉಪ್ಪಿನಂಗಡಿ: ಟೂರಿಸ್ಟ್ ಟೆಂಪೋ ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಢಿಕ್ಕಿಯಾಗಿ ದ್ವಿಚಕ್ರ ಸವಾರನೋರ್ವ ಗಂಭೀರ ಗಾಯಗೊಂಡ ಘಟನೆ ಕರ್ವೇಲ್ ಸಮೀಪದ ಹನಂಗೂರು ಎಂಬಲ್ಲಿ ರವಿವಾರ ನಡೆದಿದೆ.
ಹಿರೇಬಂಡಾಡಿ ಗ್ರಾಮದ ಹರಿನಗರ ನಿವಾಸಿ ದಿವಾಕರ (25) ಗಂಭೀರ ಗಾಯಗೊಂಡ ದ್ವಿಚಕ್ರ ಸವಾರ. ಉಪ್ಪಿನಂಗಡಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಹೋಗುತ್ತಿದ್ದ ಟೂರಿಸ್ಟ್ ಟೆಂಪೋ ಕರ್ವೇಲ್ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನವು ಹನಂಗೂರು ಬಳಿ ಮುಖಾಮುಖಿ ಡಿಕ್ಕಿ ಹೊಡೆದಿವೆ. ಟೂರಿಸ್ಟ್ ಟೆಂಪೋ ಕೈಕಂಬ ಕಡೆಯಿಂದ 34 ನೆಕ್ಕಿಲಾಡಿ ಗ್ರಾಮದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದಕ್ಕೆ ಜನಗಳನ್ನು ಕರೆದುಕೊಂಡು ಬಂದು ವಾಪಸ್ ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ. ಘಟನೆಯಿಂದ ದಿವಾಕರ ಅವರ ತಲೆಗೆ ಗಾಯವಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಗೊಂಡ ದ್ವಿಚಕ್ರ ವಾಹನ ಹೊಸದಾಗಿದ್ದು, ಇನ್ನೂ ನೋಂದಣಿ ಸಂಖ್ಯೆ ಆಗಿಲ್ಲ. ಅಪಘಾತದಿಂದ ದ್ವಿಚಕ್ರ ವಾಹನ ಸಂಪೂರ್ಣ ಜಖಂಗೊಂಡಿದೆ.
Next Story