ಉಕ್ರೇನ್: ರಶ್ಯ ಗುಂಡಿನ ದಾಳಿಯಲ್ಲಿ ಅಮೆರಿಕದ ಪತ್ರಕರ್ತ ಸಾವು

photo courtesy:twitter
ಕೀವ್, ಮಾ.13: ಉಕ್ರೇನ್ನ ಇರ್ಪಿನ್ ನಗರದಲ್ಲಿ ರಶ್ಯದ ಯೋಧರು ಅಮೆರಿಕದ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು ದಾಳಿಯಲ್ಲಿ ಮತ್ತೊಬ್ಬ ಪತ್ರಕರ್ತ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕೀವ್ ವಲಯದ ಪೊಲೀಸ್ ಮುಖ್ಯಸ್ಥ ಆ್ಯಂಡ್ರಿಯ್ ನೆಬಿಟೋವ್ ಹೇಳಿದ್ದಾರೆ.
ಆಕ್ರಮಣಕಾರರು ಈಗ ಅಂತರಾಷ್ಟ್ರೀಯ ಮಾಧ್ಯಮದ ಪತ್ರಕರ್ತರನ್ನೂ ತಮ್ಮ ದಾಳಿಗೆ ಗುರಿಯಾಗಿಸಿಕೊಂಡಿದ್ದಾರೆ. ಉಕ್ರೇನ್ನಲ್ಲಿ ತಾವು ಎಸಗುತ್ತಿರುವ ದೌರ್ಜನ್ಯದ ಕುರಿತ ವಾಸ್ತವಿಕ ವರದಿಯನ್ನು ಜಗತ್ತಿನ ಎದುರು ಪ್ರಸ್ತುತಪಡಿಸುತ್ತಿರುವ ಪತ್ರಕರ್ತರು ಆಕ್ರಮಣಕಾರರ ಗುರಿಯಾಗಿದ್ದಾರೆ. 51 ವರ್ಷದ ಅಮೆರಿಕದ ವರದಿಗಾರ ಬ್ರೆಂಟ್ ರೆನಾಡ್ರನ್ನು ರವಿವಾರ ರಶ್ಯ ಪಡೆ ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ನೆಬಟೋವ್ ಹೇಳಿದ್ದಾರೆ.
ರೆನಾಡ್ ಅವರು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಕೆಲಸಕ್ಕೆ ನಿಯೋಜನೆಗೊಂಡಿದ್ದರು ಎಂಬ ಸ್ಥಳೀಯ ಮಾಧ್ಯಮದ ವರದಿಯನ್ನು ಪತ್ರಿಕೆ ನಿರಾಕರಿಸಿದೆ. ಓರ್ವ ಪ್ರತಿಭಾನ್ವಿತ ಫೋಟೋಗ್ರಾಫರ್ ಹಾಗೂ ಸಿನೆಮ ನಿರ್ಮಾಪಕರಾಗಿದ್ದ ರೆನಾಡ್ ಅವರು ಮೃತಪಟ್ಟಿರುವುದು ಬೇಸರದ ವಿಷಯವಾಗಿದೆ. ಘಟನೆ ನಡೆದ ಸಂದರ್ಭ ಅವರು ನ್ಯೂಯಾರ್ಕ್ ಟೈಮ್ಸ್ನ ಬ್ಯಾಡ್ಜ್ ಧರಿಸಿದ್ದರು. ಆದರೆ ಕೆಲ ವರ್ಷಗಳ ಹಿಂದೆ ಅವರು ಪತ್ರಿಕೆಯ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾಗ ಈ ಬ್ಯಾಡ್ಜ್ ನೀಡಲಾಗಿತ್ತು. ಈಗ ಅವರು ಪತ್ರಿಕೆಯ ಸಿಬಂದಿಯಲ್ಲ ಎಂದು ಪತ್ರಿಕೆಯ ಉಪ ವ್ಯವಸ್ಥಾಪಕ ಸಂಪಾದಕ ಕ್ಲಿಫ್ ಲೆವಿ ಹೇಳಿದ್ದಾರೆ.





