ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವದ ಕುರಿತು ರಾಜ್ಯ ಹಿರಿಯ ನಾಯಕರು ಹೇಳುವುದೇನು?

ಬೆಂಗಳೂರು: ಪಂಚರಾಜ್ಯ ಚುನಾವಣೆಯಲ್ಲಿನ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಪಕ್ಷದ ನಾಯಕತ್ವ ಬದಲಾವಣೆ ಕುರಿತು ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ರಾಮಚಂದ್ರಾ ಗುಹಾ ಸೇರಿದಂತೆ ಹಲವು ರಾಜಕೀಯ ವಿಶ್ಲೇಷಕರು ಈಗಾಗಲೇ ಗಾಂಧಿ ಪರಿವಾರ ಕಾಂಗ್ರೆಸ್ ನಾಯಕತ್ವದಿಂದ ದೂರ ಸರಿಯಬೇಕಾದ ಕಾಲ ಬಂದಿದೆ ಎಂದು ಪ್ರತಿಪಾದಿಸಿದ್ದಾರೆ.
ಈ ನಡುವೆ ರವಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೋನಿಯಾ ಗಾಂಧಿ (Sonia Gandhi) ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಲಿ ಎಂದು ತೀರ್ಮಾನಿಸಲಾಗಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗಲಿ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣಾ ಎದುರಿಸಲಿರುವ ಕರ್ನಾಟಕದಲ್ಲಿ, ಕಾಂಗ್ರೆಸ್ ನಾಯಕರು ಹೈಕಮಾಂಡ್ ಬದಲಾವಣೆ ಕುರಿತು ಏನನ್ನುತ್ತಾರೆ ಅನ್ನುವುದು ಮುಖ್ಯವೆನಿಸಿದೆ. ರಾಜ್ಯ ಪ್ರಮುಖ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ದಿನೇಶ್ ಗುಂಡೂರಾವ್ ಮೊದಲಾದವರೆಲ್ಲಾ ಕಾಂಗ್ರೆಸ್‌ಗೆ ಗಾಂಧಿ ಪರಿವಾರದ ಅವಶ್ಯಕತೆಯನ್ನು ಪ್ರತಿಪಾದಿಸಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ರಾಜ್ಯದ ಕಾಂಗ್ರೆಸ್ ಹಿರಿಯ ನಾಯಕರ ಅಭಿಪ್ರಾಯಗಳು ಇಂತಿದೆ...
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಾಯಕತ್ವದ ಮೇಲೆ ನಮಗೆ ನಂಬಿಕೆ ಇದೆ. ಸೋನಿಯಾ ಗಾಂಧಿ ಅವರು ಪಕ್ಷವನ್ನು ಮುನ್ನಡೆಸಲಿದ್ದು, ಮುಂದಿನ ಕ್ರಮಗಳನ್ನು ಅವರೇ ತೆಗೆದುಕೊಳ್ಳಲಿದ್ದಾರೆ. ಅವರ ನಾಯಕತ್ವದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ’
- ಮಲ್ಲಿಕಾರ್ಜುನ ಖರ್ಗೆ , ರಾಜ್ಯ ಸಭೆ ವಿರೋಧ ಪಕ್ಷದ ನಾಯಕ
ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ಇಲ್ಲ. ಕಾಂಗ್ರೆಸ್ ಮುನ್ನಡೆಸಲು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸಮರ್ಥರಿದ್ದಾರೆ.
‘5 ರಾಜ್ಯಗಳ ಪೈಕಿ ಪಂಜಾಬ್‍ನಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದರೆ, ಅಲ್ಲಿ ಸ್ವಯಂಕೃತ ಅಪರಾಧದಿಂದ ಸೋತಿದ್ದೇವೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಆತ್ಮಾವಲೋಕನಕ್ಕೆ ಇದು ಸಕಾಲ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಹಾಗೆಂದು ನಾಯಕತ್ವ ಬದಲಾವಣೆ ಆಗಲ್ಲ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರೇ ಪಕ್ಷ ಮುನ್ನಡೆಸುತ್ತಾರೆ’.
- ಸಿದ್ದರಾಮಯ್ಯ, ವಿಧಾನಸಭೆ ವಿಪಕ್ಷ ನಾಯಕ
ಈವರೆಗೆ ಪಕ್ಷ ಬಿಟ್ಟು ಹೋದ ಎಲ್ಲರೂ ಅವರವರ ವೈಯಕ್ತಿಕ ಲಾಭದ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. ಆದ್ರೆ ನಾವು ಕಾಂಗ್ರೆಸ್ ಪಕ್ಷಕ್ಕೆ ನಿಯತ್ತಿನಿಂದ ಇದ್ದೇವೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳ ಪರ ಇದ್ದೇವೆ. ಎಲ್ಲಕ್ಕಿಂತಾ ಹೆಚ್ಚಾಗಿ ನಾವು ಗಾಂಧಿ ಪರಿವಾರದ ಜೊತೆಗೆ ಬೆಂಬಲವಾಗಿ ನಿಲ್ಲುತ್ತೇವೆ.
ಕಾಂಗ್ರೆಸ್ ಪಕ್ಷ ಉಳಿಯಲು, ದೇಶಾದ್ಯಂತ ಎಲ್ಲ ನಾಯಕರು ಒಗ್ಗಟ್ಟಿನಿಂದ ಇರಲು ಗಾಂಧಿ ಪರಿವಾರ ಬೇಕೇ ಬೇಕು. ಗಾಂಧಿ ಪರಿವಾರ ಕಾಂಗ್ರೆಸ್ ಪಕ್ಷದ ಅತಿ ಪ್ರಮುಖ ಭಾಗ. ಅವರಿಲ್ಲದೆ ನಾವಿಲ್ಲ.
- ಡಿ. ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಎಐಸಿಸಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರು ಮುಂದುವರಿಯಲಿದ್ದಾರೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಕುರಿತು ಚರ್ಚೆ ನಡೆಸಲಾಯಿತು. ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲು ತೀರ್ಮಾನಿಸಲಾಯಿತು.
- ದಿನೇಶ್ ಗುಂಡೂರಾವ್, ಕೆಪಿಸಿಸಿ ಮಾಜಿ ಅಧ್ಯಕ್ಷ
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷರಾಗಿಯೇ ಮುಂದುವರಿಯಲಿರುವ ಸೋನಿಯಾ ಗಾಂಧಿ: ಸರ್ವಾನುಮತದ ತೀರ್ಮಾನ ಕೈಗೊಂಡ ಸಿಡಬ್ಲ್ಯೂಸಿ







