ಚೀನಾದಲ್ಲಿ ಮತ್ತೆ ಕೋವಿಡ್ ಸೋಂಕು ಉಲ್ಬಣ: ಹಲವು ನಗರಗಳಲ್ಲಿ ಲಾಕ್ಡೌನ್ ಜಾರಿ

photo courtesy:twitter/@DextrousNinja
ಬೀಜಿಂಗ್, ಮಾ.13: ಚೀನಾದ ಹಲವು ನಗರಗಳಲ್ಲಿ ಕೋವಿಡ್ ಸೋಂಕು ಮತ್ತೆ ಉಲ್ಬಣಿಸಿದ್ದು ದೈನಂದಿನ ಸೋಂಕಿನ ಪ್ರಕರಣ ರವಿವಾರ ಏಕಾಏಕಿ 3,400ಕ್ಕೆ ತಲುಪಿದೆ. ಕಳೆದ 2 ವರ್ಷಗಳಲ್ಲೇ ಇದು ಅತ್ಯಧಿಕ ದೈನಂದಿನ ಸೋಂಕು ಪ್ರಕರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಮುಖ ಕೈಗಾರಿಕಾ ಪ್ರದೇಶ ಚಾಂಗ್ಚುನ್ನಲ್ಲಿ ಶುಕ್ರವಾರ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಸಮೀಪದ ಇತರ 3 ನಗರಗಳಲ್ಲಿ ಮಾರ್ಚ್ 1ರಿಂದ ಲಾಕ್ಡೌನ್ ಜಾರಿಯಲ್ಲಿದೆ.
ದೇಶದಾದ್ಯಂತ ಸೋಂಕು ಪ್ರಕರಣ ವಿಪರೀತ ಹೆಚ್ಚಿದ್ದು ಶಾಂಘೈಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಶೆಂಝೆನ್ ಮತ್ತು ಈಶಾನ್ಯ ಪ್ರಾಂತದ ಬಹುತೇಕ ನಗರಗಳಲ್ಲಿ ವಾರಾಂತ್ಯದ ಲಾಕ್ಡೌನ್ ಜಾರಿಗೊಳಿಸಲಾಗಿದೆ. ದೇಶದ ಸುಮಾರು 18 ಪ್ರಾಂತಗಳಲ್ಲಿ ಒಮೈಕ್ರಾನ್ ಮತ್ತು ಡೆಲ್ಟಾ ಪ್ರಭೇದದ ಸೋಂಕಿನ ಪ್ರಕರಣ ಏಕಾಏಕಿ ಉಲ್ಬಣಿಸಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. ಈಶಾನ್ಯದ ನಗರ ಜಿಲಿನ್ನಲ್ಲಿ ಶನಿವಾರ ಆಂಶಿಕ ಲಾಕ್ಡೌನ್, ಉತ್ತರಕೊರಿಯಾ ಗಡಿಯ ಸನಿಹದಲ್ಲಿರುವ , 7 ಲಕ್ಷ ಜನಸಂಖ್ಯೆಯ ಯಾಂಜಿ ನಗರದಲ್ಲಿ ರವಿವಾರ ಲಾಕ್ಡೌನ್ ಜಾರಿಗೊಳಿಸಲಾಗಿದೆ.
2019ರಲ್ಲಿ ಕೋವಿಡ್ ಸೋಂಕು ಪ್ರಕರಣ ಪ್ರಪ್ರಥಮ ಬಾರಿಗೆ ಪತ್ತೆಯಾಗಿರುವ ಚೀನಾದಲ್ಲಿ ಶೂನ್ಯ ಕೋವಿಡ್ ಕಾರ್ಯನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರೂ ಏಕಾಏಕಿ ಸೋಂಕಿನ ಪ್ರಕರಣ ಉಲ್ಬಣಿಸಿರುವುದು ಕಾರ್ಯನೀತಿಯ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ. ಜಿಲಿನ್ ಪ್ರಾಂತದ ಕೆಲವೆಡೆ ತುರ್ತು ಪ್ರತಿಕ್ರಿಯೆ ಕಾರ್ಯವಿಧಾನ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಮೈಕ್ರಾನ್ ಸೋಂಕಿನ ಪ್ರಬೇಧದ ಬಗ್ಗೆ, ಅದರ ಗುಣಲಕ್ಷಣದ ಬಗ್ಗೆ ಅಧಿಕಾರಿಗಳಲ್ಲಿ ಹೆಚ್ಚಿನ ಮಾಹಿತಿಯ ಕೊರತೆಯಿದೆ ಎಂದು ಜಿಲಿನ್ ಪ್ರಾಂತದ ಆರೋಗ್ಯ ಆಯೋಗದ ಅಧಿಕಾರಿ ಝಾಂಗ್ ಯಾನ್ ಹೇಳಿದ್ದಾರೆ. ಈ ನಗರದಲ್ಲಿ 6 ಸುತ್ತಿನ ಸಾಮೂಹಿಕ ಸೋಂಕು ಪರೀಕ್ಷೆ ನಡೆಸಿದ್ದರೂ ಶನಿವಾರ ಒಮೈಕ್ರಾನ್ ಸೋಂಕಿನ 2,200 ಪ್ರಕರಣ ಪತ್ತೆಯಾಗಿದೆ. ಜಿಲಿನ್ ನಗರದ ಮೇಯರ್ ಹಾಗೂ ಚಾಂಗ್ಚುನ್ ನಗರದ ಆರೋಗ್ಯ ಆಯೋಗದ ಮುಖ್ಯಸ್ಥರನ್ನು ವಜಾಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.







