ಉಕ್ರೇನ್ ಗೆ 200 ಮಿಲಿಯನ್ ಡಾಲರ್ ಮೊತ್ತದ ಹೆಚ್ಚುವರಿ ಮಿಲಿಟರಿ ನೆರವು: ಜೋ ಬೈಡನ್ ಆದೇಶ

photo pti
ವಾಷಿಂಗ್ಟನ್, ಮಾ.13: ಉಕ್ರೇನ್ ಮೇಲೆ ರಶ್ಯದ ಬಾಂಬ್ ದಾಳಿ ಮುಂದುವರಿದಿರುವಂತೆಯೇ, ಉಕ್ರೇನ್ಗೆ ಹೆಚ್ಚುವರಿಯಾಗಿ 200 ಮಿಲಿಯನ್ ಡಾಲರ್ ಮೊತ್ತದ ಮಿಲಿಟರಿ ಸಾಧನಗಳನ್ನು ರವಾನಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.
ಉಕ್ರೇನ್ಗೆ 350 ಮಿಲಿಯನ್ ಡಾಲರ್ ಮೊತ್ತದ ರಕ್ಷಣಾ ಸಾಧನಗಳನ್ನು ಒದಗಿಸಲು ಫೆಬ್ರವರಿ 26ರಂದು ಅಮೆರಿಕ ಸರಕಾರ ಅನುಮೋದನೆ ನೀಡಿತ್ತು. ಆದರೆ, ರಶ್ಯದ ನಿರಂತರ ವಾಯುದಾಳಿಯನ್ನು ಎದುರಿಸಲು ಇನ್ನಷ್ಟು ಮಿಲಿಟರಿ ನೆರವಿನ ಅಗತ್ಯವಿರುವುದಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ನೇಟೊ ಒಕ್ಕೂಟಕ್ಕೆ ಮನವಿ ಮಾಡಿದ್ದರು.
ಇದೀಗ ಉಕ್ರೇನ್ಗೆ ಹೆಚ್ಚುವರಿಯಾಗಿ 200 ಮಿಲಿಯನ್ ಡಾಲರ್ ಮೊತ್ತದ ಮಿಲಿಟರಿ ಉಪಕರಣ ರವಾನಿಸಲು ಅಧ್ಯಕ್ಷ ಬೈಡನ್ ಅಮೆರಿಕದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ಗೆ ಆದೇಶಿಸಿದ್ದಾರೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಮೂಲಗಳು ಹೇಳಿವೆ. ಈ ಮಧ್ಯೆ, ಉಕ್ರೇನ್ಗೆ ಪಾಶ್ಚಿಮಾತ್ಯ ದೇಶಗಳು ರವಾನಿಸುವ ಶಸ್ತ್ರಾಸ್ತ್ರಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ರಶ್ಯ ಶನಿವಾರ ಎಚ್ಚರಿಸಿದೆ.ಉಕ್ರೇನ್ಗೆ ಹೆಚ್ಚುವರಿಯಾಗಿ 550 ಮಿಲಿಯನ್ ಡಾಲರ್ ಮೊತ್ತದ ಸೇನಾ ನೆರವು ಒದಗಿಸುವುದಾಗಿ ಶುಕ್ರವಾರ ಯುರೋಪಿಯನ್ ಯೂನಿಯನ್ ಮುಖಂಡರು ಘೋಷಿಸಿದ್ದಾರೆ.







