ಬೆಳ್ತಂಗಡಿ: ಗುರುವಾಯನಕೆರೆಯಲ್ಲಿ ಸಾವಿರಾರು ಮೀನುಗಳ ಸಾವು

ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು
ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತು ನೀರಿನ ಮೇಲೆ ತೇಲುತ್ತಿವೆ.
ಸುಮಾರು ಮೂರು ಎಕ್ರೆಗೂ ಅಧಿಕವಿರುವ ಗುರುವಾಯನಕೆರೆಯಲ್ಲಿ ವಿಷ ಪ್ರಾಶನ ಅಥವಾ ಕೆಮಿಕಲ್ ರಿಯಾಕ್ಷನ್ ಆಗಿರುವ ಸಾಧ್ಯತೆ ಕುರಿತು ಅನುಮಾನ ವ್ಯಕ್ತವಾಗಿದೆ.
ಕಳೆದ ಒಂದೆರಡು ವಾರಗಳಿಂದ ಕೆರೆ ನೀರಿನ ಬಣ್ಣ ಬದಲಾಗಿರುವ ಕುರಿತು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ನಿನ್ನೆಯಿಂದ ಸಣ್ಣಪುಟ್ಟ ಮೀನುಗಳು ಕೆರೆ ದಡದಲ್ಲಿ ಪ್ರಾಣಕಳೆದುಕೊಂಡು ತೇಲಾಡುತ್ತಿವೆ.
ಸರ್ವೇ ನಂ 15/ 1 ರಲ್ಲಿ 14.71 ಎಕ್ರೆ ವಿಸ್ತೀರ್ಣದ ಕೆರೆಯಾಗಿದ್ದು ಮೀನುಗಳು ಇಲ್ಲಿ ಆಶ್ರಯಪಡೆದಿವೆ. ಬಹು ಅಪರೂಪದ ಮೀನುಗಳು ಕೆರೆಯಲ್ಲಿದ್ದು ವಿಷಪೂರಿತ ನೀರಿನಿಂದ ಎಲ್ಲ ಮೀನುಗಳ ಮಾರಣ ಹೋಮವಾಗಲಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಈಗಾಗಲೆ ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಕುವೆಟ್ಟು ಗ್ರಾ.ಪಂ. ಆಡಳಿತ ಮಂಡಳಿ, ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿದ್ದು ನೀರಿನ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಲಾಗಿದೆ.
ಇಷ್ಟು ದೊಡ್ಡ ಕೆರೆಯ ನೀರಿಗೆ ವಿಷಯುಕ್ತ ನೀರು ಸೇರಿದ್ದರಿಂದ ಈ ಪ್ರಮಾಣದಲ್ಲಿ ಮೀನುಗಳು ಸಾವನಪ್ಪಿದೆಯೇ ಅಥವಾ ಇನ್ಯಾವುದೇ ಕಾರಣವಿರಬಹುದೇ ಎಂಬುದರ ಕುರಿತು ತನಿಖೆ ನಡೆಯಬೇಕಿದೆ.
