ಅಸ್ವಸ್ಥಗೊಂಡ ಪ್ರಯಾಣಿಕನ ರಕ್ಷಣೆಗೆ ತುರ್ತು ಲ್ಯಾಂಡಿಂಗ್ ಆದ ಬೆಂಗಳೂರು-ಕೋಲ್ಕತಾ ವಿಮಾನ

ಭುವನೇಶ್ವರ: ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗಲೇ ಅಸ್ವಸ್ಥಗೊಂಡಿದ್ದ ಪ್ರಯಾಣಿಕರೊಬ್ಬರನ್ನು ರಕ್ಷಿಸಲು ರವಿವಾರ ಬೆಳಗ್ಗೆ ಏರ್‌ಏಷ್ಯಾ ಬೆಂಗಳೂರು-ಕೋಲ್ಕತ್ತಾ ವಿಮಾನವನ್ನು ಭುವನೇಶ್ವರಕ್ಕೆ ತಿರುಗಿಸಿ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಆದರೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಪ್ರಯಾಣಿಕನ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ ಅನುಮತಿ ಪಡೆದ ಬಳಿಕ ವಿಮಾನವನ್ನು ಭುವನೇಶ್ವರಕ್ಕೆ ತಿರುಗಿಸಲಾಯಿತು. ಅಲ್ಲಿ ಬೆಳಿಗ್ಗೆ 7.56 ಕ್ಕೆ ವಿಮಾನ ಇಳಿಯಿತು. ವಿಮಾನ ನಿಲ್ದಾಣದ ಅಧಿಕಾರಿಗಳು ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಸಮಯಕ್ಕಿಂತ ಮುಂಚಿತವಾಗಿ ಆಂಬ್ಯುಲೆನ್ಸ್ ಅನ್ನು ಕಳುಹಿಸಿದ್ದರು.
ಆದಾಗ್ಯೂ, ಕ್ಯಾಪಿಟಲ್ ಆಸ್ಪತ್ರೆಯ ವೈದ್ಯರು ಪಶ್ಚಿಮ ಬಂಗಾಳದ ಹಬೀಬುರ್ ಖಾನ್ (27 ವರ್ಷ) ಎಂಬ ಪ್ರಯಾಣಿಕ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
"ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ವಿಮಾನವನ್ನು ಇಲ್ಲಿಗೆ ತಿರುಗಿಸಲಾಯಿತು ಹಾಗೂ ಸುರಕ್ಷಿತವಾಗಿ ಇಳಿಸಲಾಯಿತು. ಅರ್ಧ ಗಂಟೆಯ ನಂತರ ವಿಮಾನವು ತನ್ನ ಗಮ್ಯಸ್ಥಾನಕ್ಕೆ ಮರಳಿತು" ಎಂದು ವಿಮಾನ ನಿಲ್ದಾಣದ ನಿರ್ದೇಶಕ ಪ್ರವತ್ ರಂಜನ್ ಬ್ಯೂರಿಯಾ ಹೇಳಿದ್ದಾರೆ.
ವರದಿಗಳ ಪ್ರಕಾರ, ಪ್ರಯಾಣಿಕ ಹಬೀಬುರ್ ಖಾನ್ ಈ ಹಿಂದೆ ಆರೋಗ್ಯ ಸ್ಥಿತಿಯ ಕಾರಣ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದರು. ಈಗ ತನ್ನ ಸ್ವಗ್ರಾಮಕ್ಕೆ ಹೋಗುತ್ತಿದ್ದರು .







