ಬಾಳೆಕಾಯಿ ಸೋತಾಗ ಊರುಗೋಲಾದ ಬಾಕಾಹು
ಆಯ್ದ ಪುಟದಿಂದ

ಯಾವ ತರಬೇತಿಯನ್ನೂ ಪಡೆಯದೇ ಈ ರೈತರು ಸದ್ದಿಲ್ಲದೆ ಬಾಳೆಕಾಯಿಯ ಅತಿ ಮಹತ್ವದ ಮೌಲ್ಯವರ್ಧನೆಯ ದಾರಿ ಕಂಡುಕೊಂಡಿದ್ದಾರೆ. ಒಣಗಿಸಲು ಸೂರ್ಯದೇವನ ಕೃಪೆ. ಹುಡಿ ಮಾಡಿಕೊಡಲು ಗಿರಣಿ ಮಾಲಕನ ಪ್ರೀತಿ, ಬಾಕಾಹುವನ್ನು ಮೂವರೂ ಬೇರೆಬೇರೆ ರೀತಿಗಳಲ್ಲಿ, ಆದರೆ ಪ್ರಯಾಸ ಪಡದೆ ಮಾರುಕಟ್ಟೆ ಮಾಡಿದ್ದಾರೆ. ಈ ಮೂಲಕ ರಾಜ್ಯಕ್ಕೆ ಬೆಳಕಾಗಿದ್ದಾರೆ.
ಮಾರುಕಟ್ಟೆ ಕುಸಿದಾಗ ಕೋಲಾರದ ಟೊಮೆಟೊ ಬೆಳೆಗಾರರು ಏನು ಮಾಡುತ್ತಾರೆ? ಹತಾಶರಾಗಿ ರಸ್ತೆಗೆ ಸುರಿಯುತ್ತಾರೆ. ಬೆಳೆಯ ಮೇಲೆಯೇ ಟ್ರಾಕ್ಟರ್ ಓಡಿಸುವವರನ್ನು, ಬೆಳೆದ ಕಲ್ಲಂಗಡಿ ಹಣ್ಣನ್ನು ಮಚ್ಚಿನಿಂದ ಕೊಚ್ಚುತ್ತಾ ಹೋದವರನ್ನು ನೀವು ಕಂಡಿದ್ದೀರಿ. ಬಾಳೆಕಾಯಿ ಬೆಳೆದವರ ಗತಿಯಲ್ಲೂ ತುಂಬ ವ್ಯತ್ಯಾಸವಿಲ್ಲ.
ಮಲೆನಾಡಿನಲ್ಲಿ ಅದೆಷ್ಟೋ ಬೆಳೆಗಾರರು ಬೆಲೆ ಕುಸಿತ ಬಾಳೆಕಾಯಿಯನ್ನು ಕೊಳ್ಳುವವರಿಲ್ಲದೆ ಆಕಳುಗಳಿಗೆ ತಿನ್ನಿಸಿದ್ದಾರೆ. ಬಾಳೆಕಾಯಿಯನ್ನು ಕಾಂಪೋಸ್ಟ್ ಮಾಡಿದ ವಿದ್ಯಾವಂತ ಕೃಷಿಕರ ಬಗ್ಗೆಯೂ ಪತ್ರಿಕೆಗಳಲ್ಲಿ ವರದಿ ಬಂದಿತ್ತು.
ಕಿಲೋಗೆ ಹತ್ತರಿಂದ ಇಪ್ಪತ್ತು ರೂ., ಅಪರೂಪಕ್ಕೊಮ್ಮೆ ಮೂವತ್ತರ ವರೆಗೆ ಜಿಗಿಯುತ್ತಿದ್ದ ಸ್ಥಳೀಯ ಬಾಳೆಕಾಯಿ ಬೆಲೆ ಮೂರರಿಂದ ಐದರ ಪಾತಾಳಕ್ಕಿಳಿಯಿತು. ‘ಬೇಡ’ ಎನ್ನತೊಡಗಿದರು ವ್ಯಾಪಾರಿಗಳು. ಅವರಾದರೂ ಅಷ್ಟೇ, ಕೊಂಡುಕೊಂಡರೆ ಎಲ್ಲಿಗೆ ಕಳಿಸಬಲ್ಲರು? ಯಾರಿಗೆ ಮಾರಬಲ್ಲರು? - ಇದು ಲಾಕ್‌ಡೌನ್ ಕಾಲದ ಬಾಳೆಕಾಯಿಯ ಸಂಕಟ. ರಸ್ತೆಯಲ್ಲಿ ಸುರಿಯದ ಕಾರಣ ಈ ಸಂಕಟ ಫೋಟೊಕ್ಕೆ ಸಿಗಲಿಲ್ಲ. ಮೌನವಾಗಿ ಉಳಿಯಿತು. ಹೊರಗಿನ ಸಮಾಜ, ಆಡಳಿತಕ್ಕೆ ತಲುಪಿದ್ದೇ ಕಮ್ಮಿ!
ಈ ನಡುವೆ ಬೆಳಗಾವಿ ಜಿಲ್ಲೆಯ ಮೂವರು ಸಾವಯವ ಕೃಷಿಕರು ಸದ್ದಿಲ್ಲದೆ ಪ್ರಯತ್ನಪಟ್ಟು ಈ ಸಂಕಟಕ್ಕೊಂದು ಪರಿಹಾರ ಕಂಡುಕೊಂಡರು. ಅದುವೇ ಬಾಳೆಕಾಯಿ ಹುಡಿ/ಹಿಟ್ಟು. ಇದಕ್ಕಾಗಿ ಇವರು ಯಾವುದೇ ಸರಕಾರಿ ತರಬೇತಿ ಪಡೆಯಲಿಲ್ಲ. ವೆಬಿನಾರಿನಲ್ಲಿ ಭಾಗವಹಿಸಲಿಲ್ಲ. ಕೃಷಿ ವಿಜ್ಞಾನಿಗಳ ಸಲಹೆ ಪಡೆಯಲಿಲ್ಲ. ಬಳಸಿದ್ದು ಸಾಮಾನ್ಯ ಜ್ಞಾನ. ಚಾಕುಗಳು, ಮನೆಮಂದಿಯ ತೋಳ್ಬಲ, ಸೂರ್ಯದೇವನ ತಾಕತ್ತು ಮತ್ತು ತಮ್ಮಾಳಗಿನ ಅಮಿತೋತ್ಸಾಹ.
ಮನೆಮಂದಿ ಸೇರಿ ಮೌಲ್ಯವರ್ಧನೆ
ಮೂವರೂ ರಾಮದುರ್ಗ ತಾಲೂಕಿನವರು. ಮಹಾಮಾರಿಯ ಆತಂಕ, ಲಾಕ್‌ಡೌನಿನ ಅಡಚಣೆಗಳನ್ನೂ ಇವರು ಎದುರಿಸಬೇಕಿತ್ತು. ಮೂವರು ಕೃಷಿಕರ ಪೈಕಿ ಯುವ ಉತ್ಸಾಹಿ ಅಜ್ಜಪ್ಪ ಕುಲಗೋಡು (37) ಇವರ ಸಾಧನೆ ನಿಜಕ್ಕೂ ಹುಬ್ಬೇರಿಸುವಂಥದ್ದು. ಮನೆಮಂದಿಯೆಲ್ಲಾ ಸೇರಿ ಬಾಕಾಹು ತಯಾರಿಸಿದರೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಅಜ್ಜಪ್ಪರ ಅಮ್ಮ ಪಾರ್ವತವ್ವ. ವಯಸ್ಸು 61.
ಕಾಲು ಕಿಲೋದಿಂದ ಒಂದು ಕಿಲೋದ ವರೆಗಿನ ಪ್ಯಾಕೆಟ್ ಮಾಡಿ ತರಕಾರಿಯೊಡನೆ ಸಂತೆಯಲ್ಲಿ, ಮನೆಮನೆಗೂ ಮಾರಾಟ. ಕಳೆದೊಂದು ವರ್ಷದಲ್ಲಿ ಲಾಕ್‌ಡೌನ್ ನಡುವೆ ಸ್ವಲ್ಪ ಭರವಸೆ ಸಿಕ್ಕಾಗಲೆಲ್ಲಾ ಉತ್ಪಾದನೆ. ಈವರೆಗೆ ಮಾರಿದ್ದು 462 ಕಿಲೋ. ಆರಂಭದಲ್ಲಿ ಪರಿಚಿತರಿಗೆ ಹಂಚಿದ್ದೂ ಸೇರಿಸಿದರೆ ಅರ್ಧ ಟನ್ ಬಾಕಾಹು ಉತ್ಪಾದನೆ!
ಅಜ್ಜಪ್ಪ ಓದಿದ್ದು ಎಸೆಸೆಲ್ಸಿ. ನಂತರ ಇಲೆಕ್ಟ್ರಿಕಲ್ ಐಟಿಐ ಕೋರ್ಸ್ ಮಾಡಿದರು. ಕೂಡುಕುಟುಂಬ. ಅಪ್ಪ-ಅವ್ವ ಇವರು, ತಮ್ಮ, ಇವರಿಬ್ಬರ ಪತ್ನಿಯರು ಮತ್ತು ನಾಲ್ವರು ಮಕ್ಕಳು. ಒಟ್ಟು ಆರು ಚಿಲ್ಲರೆ ಎಕ್ರೆ ಜಮೀನು. ಮುಖ್ಯ ಬೆಳೆಗಳೆಂದರೆ ಬಾಳೆ, ತರಕಾರಿ ಮತ್ತು ಅರಿಶಿನ. ಮೂರೆಕರೆಯಲ್ಲಿ ಬಾಳೆ ಕೃಷಿ ಇದೆ. ರಾಜಾಪುರಿ ಎಂಬ ಜವಾರಿ ತಳಿ ಮುಖ್ಯ. ಈಚೆಗೆ ಜಿ9 ಕೃಷಿಗೂ ತೊಡಗಿದ್ದಾರೆ. ಸಾವಯುವ ಚಳವಳಿಯಲ್ಲಿ ತೊಡಗಿಸಿಕೊಂಡ ಕಾರಣ ಜವಾರಿ ತರಕಾರಿ ಕೃಷಿ, ಬೀಜೋತ್ಪಾದನೆ ಇತ್ಯಾದಿ ನಡೆಸುತ್ತಿದ್ದಾರೆ. ಮೊದಲಿನಿಂದಲೂ ಮೌಲ್ಯವರ್ಧನೆಯ ಗುಂಗು ಇತ್ತು. ಇವರ ಜಿಲ್ಲೆಯಲ್ಲಿ ಬಾಳೆಕೃಷಿ ಚೆನ್ನಾಗಿ ಇದೆ. ಕೊರೋನ ಕಾರಣದಿಂದ ಬೇಡಿಕೆ ತಳಕ್ಕಿಳಿಯಿತು. ಕಿಲೋಗೆ 11-12 ರೂ. ಸಿಗುತ್ತಿದ್ದ ಜಿ9 ಬಾಳೆಗೆ 4-5 ರೂ. ಸಿಕ್ಕಲೂ ಕಷ್ಟ.
ಕೈಗೂಡದ ಚಿಪ್ಸ್, ಕೈಹಿಡಿದ ಪೌಡರು
ಅಜ್ಜಪ್ಪ ಬಾಳೆಕಾಯಿಯ ಚಿಪ್ಸ್ ಮಾಡಹೊರಟರು. ‘‘ಎಲ್ಲೂ ಗುಣಮಟ್ಟದ ಎಣ್ಣೆ ಸಿಗಲಿಲ್ಲ. ಪೂರ್ತಿ ಕಲಬೆರಕೆ. ವರ್ಷಗಳಿಂದ ಸಾವಯವವನ್ನೇ ನಂಬಿ ಪ್ರೋತ್ಸಾಹಿಸುತ್ತಾ ಬಂದ ನಾವು ಇನ್ನೇನನ್ನೋ ಬೆರಕೆಮಾಡಿ ಕೊಟ್ಟಂತಾಗುತ್ತದೆ ಎಂದು ಮಿತ್ತರು ಹೇಳಿದರು. ನಮಗೂ ಸರಿ ಅನ್ನಿಸಿತು. ಅಲ್ಲಿಗೆ ಚಿಪ್ಸಿನ ಅಧ್ಯಾಯಕ್ಕೆ ತೆರೆ.
ಬೆಲೆ ತೀರಾ ಕುಸಿದಾಗ ಕೊಯ್ಲಿಗೆ ಸಿದ್ಧವಾದ ಬಾಳೆಬೆಳೆ ಇದ್ದ ಹಲವರು ಕೃಷಿಕರಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಅಜ್ಜಪ್ಪನವರ ಸ್ನೇಹಿತ ವಸ್ತಾದ್ ಇವರಿಗೆ ಒಂದು ದೊಡ್ಡ ಲಾಟ್ ಬಾಳೆಕಾಯಿ ಮುಫತ್ತಾಗಿ ಕೊಟ್ಟರು. ಆರು ಕ್ವಿಂಟಾಲ್ ಇತ್ತು.
ಅಜ್ಜಪ್ಪನವರ ಅಮ್ಮ ಪಾರ್ವತವ್ವ ತರಕಾರಿ ಹೊತ್ತೊಯ್ದು ಮಾರಾಟ ಮಾಡುತ್ತಾರೆ. ಇದು ಗೊತ್ತಿರುವ ಗೆಳೆಯರು ಬಾಳೆಕಾಯಿ ರಾಶಿ ಕೊಡುವಾಗ ಹೇಳಿದ್ದಿಷ್ಟು: ‘‘ಮನೆಗೆ ಒಯ್ತೀ. ನಿಮ್ ತಾಯಿಗೆ ಮಾರಾಟ ಮಾಡಲು ಆಗ್ತಿದ್ದರೆ ಮಾಡಿ, ಇಲ್ಲಾಂದ್ರೆ ದನಕ್ಕಾದರೂ ಹಾಕಿ. ನನಗಂತೂ ಏನೂ ರೊಕ್ಕ ಕೊಡ್ಬೆಡಿ’’ ಅಂತ.
ಪಾರ್ವತವ್ವನಿಗೂ ಈ ಬಾಳೆಕಾಯಿಗೆ ಹೆಚ್ಚು ಬೇಡಿಕೆ ಕುದುರಿಸಲು ಆಗ ಆಗಲಿಲ್ಲ. ‘‘ಇದಕ್ಯಾಕೆ ಇಷ್ಟು ಬೆಲೆ? ಮಾರ್ಕೆಟಿನಾಗೆ ರಗಡ್ ಸಿಕ್ತೈತಿ, ಜವಾರಿ ಹಣ್ಣು ಇದ್ರೆ ಕೊಡವ್ವಾ’’ ಎಂದು ಗ್ರಾಹಕರು ಕೈಚೆಲ್ಲಿದರು. ಅಂತೂ ಇಂತೂ ಹಣ್ಣುಮಾಡಿದ ಒಂದು ಕ್ವಿಂಟಾಲಿನಲ್ಲಿ ಅರ್ಧದಷ್ಟು ಮಾರಾಟ ಮಾಡುವಾಗ ಇವರು ಸುಸ್ತು, ಐದು ಕ್ವಿಂಟಾಲ್ ಕಾಯಿ ಇನ್ನೂ ಉಳಿದಿತ್ತು.
ಇನ್ನೇನು ಮಾಡೋಣ ಎಂಬ ಚಿಂತೆ ಹುಟ್ಟಿತು. ಬಾಳೆಕಾಯಿ ಹುಡಿಯ ಯೋಚನೆ ಸ್ವಲ್ಪ ಕಾಲದಿಂದ ಮನದಲ್ಲಿತ್ತು. ಅಜ್ಜಪ್ಪನವರ ಬಳಿ ಡ್ರೈಯರ್ ಇರಲಿಲ್ಲ. ಹುಡಿಮಾಡುವ ಸೌಕರ್ಯವೂ ಇರಲಿಲ್ಲ. ಆದದ್ದಾಗಲಿ ಎಂದು ಮನೆಮಂದಿ ಸೇರಿ ಬಾಕಾಹು ಮಾಡಲು ಹೊರಟೇಬಿಟ್ಟರು. ಕಾಯಿಯನ್ನು ಹೆಚ್ಚಿ ಸಿಪ್ಪೆ ತೆಗೆದು ತಾರಸಿಯಲ್ಲಿ ಒಣಗಿಸಿದರು. ಮೂರು ಕಿಲೋಮೀಟರ್ ದೂರದ ಗಿರಣಿಗೆ ಒಯ್ದು ಹುಡಿಮಾಡಿಸಿ ತಂದರು.
ಹೊಸ ಜಾಗದಲ್ಲೂ ಸ್ವೀಕಾರ
ಮೊದಲಿಗೆ ಒಂದಷ್ಟು ಬಂಧುಮಿತ್ರರಿಗೆ ಕೊಟ್ಟರು. ಒಳ್ಳೆ ಮಾತು ಬಂತು. ಚಪಾತಿ ಮಾಡುವಾಗ ಅರ್ಧದಷ್ಟು ಇದೇ ಹುಡಿ ಸೇರಿಸಿ ನೋಡಿದರು. ಪ್ರಯೋಗ ಯಶಸ್ವಿ. ಈಗ ಇವರ ಮನೆಯಲ್ಲಿ ವಾರಕ್ಕೆ ಎರಡು ಮೂರು ದಿನ ಗೋಧಿ-ಬಾಕಾಹು ಚಪಾತಿ. ಎಲ್ಲರಿಗೂ ಇಷ್ಟವೇ. ಅಲ್ಲಿಂದ ಮತ್ತೆ ವ್ಯವಹಾರ ಗರಿಬಿಚ್ಚಿಕೊಂಡಿತು. ಕಾಲು, ಅರ್ಧ ಮತ್ತು ಒಂದು ಕಿಲೋದ ಪ್ಯಾಕೆಟ್ ಮಾಡಿ ಮಾರಾಟಕ್ಕೆ ಆರಂಭ.
ಬೆಲೆ ಹೆಚ್ಚು ಇಡಲಿಲ್ಲ. ತುಂಬ ಕಮ್ಮಿಯೇ. ಕಾಲು ಕಿಲೋಕ್ಕೆ 35 ರೂ. ಅರ್ಧಕ್ಕೆ 70, ಒಂದು ಕಿಲೋ ಪ್ಯಾಕಿಗೆ ರೂ. 140. ಅಜ್ಜಪ್ಪ ಸಾವಯವ ವರ್ತುಲಗಳಲ್ಲಿ ಪರಿಚಿತರು. ಅರಿಶಿನ ಹುಡಿ, ದೇಸೀ ಬೀಜ ಮಾರಾಟ ಹಿಂದಿನಿಂದಲೇ ಇತ್ತು. ರಾಮದುರ್ಗದಲ್ಲಿ ನಡೆಯುವ ವಾರದ ಸಂತೆಯಲ್ಲಿ ಇದನ್ನೂ ಮಾರಿದರು. ಪ್ರತಿಕ್ರಿಯೆ ಅಡ್ಡಿ ಇಲ್ಲದಂತಿತ್ತು. ಆದರೆ ಕೋವಿಡ್ ಕಾರಣದಿಂದ ಸಂತೆ ನಿಂತಿತು.
ಆದರೆ ಪಾರ್ವತವ್ವನ ಮೊಬೈಲ್ ಮಾರ್ಕೆಟಿಂಗ್ ನಡೆದೇ ಇತ್ತು. ಈ ಕುಟುಂಬ ಅನುಕೂಲವಾದಾಗಲೆಲ್ಲಾ ಬಾಕಾಹು ಉತ್ಪಾದನೆ ಮುಂದುವರಿಸಿತು. ಕುಟುಂಬದ ಎಲ್ಲರ ಪಾಲುಗಾರಿಕೆ, ಅಜ್ಜಪ್ಪ, ತಂದೆ ಹನುಮಂತಪ್ಪ, ತಾಯಿ ಪಾರ್ವತವ್ವ, ಅಜ್ಜಪ್ಪರ ಪತ್ನಿ ಸುಜಾತಾ, ತಮ್ಮ ಭೀಮಪ್ಪ ಮತ್ತು ಅವರ ಪತ್ನಿ ಸುರೇಖಾ. ಸಂಜೆ ಹೊತ್ತು ಊಟಕ್ಕೆ ಮೊದಲು ಬಾಳೆಕಾಯಿ ಕತ್ತರಿಸಿ ಸಿಪ್ಪೆ ತೆಗೆಯುವ ಕೆಲಸ. ಚಾಕುಗಳ ಬಳಕೆ. ಕತ್ತರಿಸಿದ ನಂತರ ಸಿಪ್ಪೆ ತೆಗೆಯುತ್ತಾರೆ. ವಾಸ್ತವದಲ್ಲಿ ಬಾಳೆಕಾಯಿ ಹಿಟ್ಟು - ಇವರು ಬಾಳೆಕಾಯಿ ಪೌಡರ್ ಎಂದು ಕರೆಯುತ್ತಾರೆ - ತಯಾರಿಯಲ್ಲಿ ಹೆಚ್ಚು ಸಮಯ ಬೇಡುವ ಕೆಲಸವೇ ಇದು. ಕಾಯಿಗಳ ಸಿಪ್ಪೆ ತೆಗೆದು ತುಂಡರಿಸುವುದು.
ಉದ್ದಿಮೆಗಳ ಅವಶ್ಯಕ್ಕೆ ತಕ್ಕುದಾದ ರೀತಿಯ, ಈ ಕೆಲಸ ಪೂರೈಸುವ ಬೇರೆಬೇರೆ ರೀತಿಯ ಸ್ಲೈರುಗಳು ಮಾರುಕಟ್ಟೆಯಲ್ಲಿವೆ. ಆದರೆ ತೀರಾ ಸಣ್ಣ ಪ್ರಮಾಣದವರಿಗೆ ಇದು ಇಲ್ಲದೆಯೂ ನಡೆಯುತ್ತದೆ. ಈ ಕೆಲಸ ಮಾಡಲು ಐದಾರು ಮನೆಮಂದಿ ಇರುವ ಕಾರಣ ಅಜ್ಜಪ್ಪನವರಿಗೆ ಇದು ತ್ರಾಸ ಎನಿಸಿಲ್ಲ.
ತಾರಸಿಯಲ್ಲೇ ಡ್ರೈಯಿಂಗ್ ‘‘ಒಬ್ಬರು ಒಳಗೆ ಅಡುಗೆಯ ಜವಾಬ್ದಾರಿ ವಹಿಸಿದರೆ, ಉಳಿದವರು ಬಾಳೆಕಾಯಿ ತುಂಡರಿಸಿ ಚಿಪ್ಸ್ ಮಾಡುತ್ತೇವೆ. ರಾತ್ರಿ ಅದನ್ನು ಮುಚ್ಚಿ ಇಟ್ಟು ಬೆಳಗ್ಗೆ ಬಿಸಿಲು ಬಂದಾಗ ತಾರಸಿಯ ಮೇಲೆ ಒಣಗಲು ಹಾಕುತ್ತೇವೆ.’’ ಅಜ್ಜಪ್ಪ ವಿವರಿಸುತ್ತಾರೆ.
ಇಬ್ಬನಿಯಿಂದ ಒದ್ದೆಯಾಗದಂತೆ, ಒಣಗಲು ಹಾಕಿದ ಚಿಪ್ಸಿನ ಮೇಲೆ ರಾತ್ರಿ ಬಟ್ಟೆ ಹೊದೆಸುತ್ತಾರೆ. ಒಣಗಲು ಹಾಕುವ ಜಾಗದ್ದೇ ಪರಿಮಿತಿ, ಎರಡರಿಂದ ಮೂರು ದಿನ ಒಣಗಬೇಕು. ಚಿಪ್ಸ್ ಒಂದಷ್ಟು ಒಣಗಿದ ಮೇಲೆ ಪದರ ದಪ್ಪ ಮಾಡಬಹುದು. ಆಗ ಇನ್ನಷ್ಟು ಚಿಪ್ಸ್ ಕತ್ತರಿಸಿ ಒಣಹಾಕಲು ಬರುತ್ತದೆ. ಅಜ್ಜಪ್ಪ ಕುಟುಂಬ ಕತ್ತರಿಸಿದ ಬಾಳೆಕಾಯಿಯ ಬಣ್ಣ ಬದಲಿಸದಂತೆ ಏನೂ ಆರೈಕೆ ಮಾಡುವುದಿಲ್ಲ. ಹುಡಿ ಅಚ್ಚ ಬಿಳಿ ಬಣ್ಣ ಅಲ್ಲ, ಸ್ವಲ್ಪ ಬದಲಾವಣೆ ಹೊಂದಿರುತ್ತದೆ. ಸಾಮಾನ್ಯವಾಗಿ ಈ ಥರದ ಗೃಹೋತ್ಪನ್ನಗಳಿಗೆ ಮಾರುಕಟ್ಟೆಯದೇ ಸಮಸ್ಯೆ. ಸಾಲದ್ದಕ್ಕೆ ಇವರು ಸಾಕಷ್ಟು ಅಧ್ಯಯನ, ಪೂರ್ವತಯಾರಿಗಳೊಂದಿಗೆ ರಂಗಪ್ರವೇಶ ಮಾಡಿದವರಲ್ಲ. ಆದರೆ ಈ ಕುಟುಂಬಕ್ಕದು ದೊಡ್ಡ ತಲೆನೋವಾದಂತಿಲ್ಲ. ಏಕೆಂದರೆ ಈ ಕುಟುಂಬದಲ್ಲಿದೆ ಚಲಿಸುವ ಮಾರುಕಟ್ಟೆ!.
ಚಲಿಸುವ ಮಾರುಕಟ್ಟೆ
ಪಾರ್ವತವ್ವ ತರಕಾರಿ ಕೃಷಿಯಲ್ಲಿ ಹೇಗೆ ನಿಪುಣೆಯೋ, ಅವನ್ನು ಮಾರುವುದರಲ್ಲೂ ಜಾಣೆಯೇ. ವಾರದಲ್ಲಿ ಮೂರ್ನಾಲ್ಕು ದಿನ ನೇಕಾರರಪೇಟೆಯ ಮಾರುಕಟ್ಟೆಯಲ್ಲಿ ಕುಳಿತು ವ್ಯಾಪಾರ. ಅಲ್ಲಿನ ಮಾರುಕಟ್ಟೆಯ ಅವಧಿ ಬೆಳಗ್ಗೆ 8ರಿಂದ ಮಧ್ಯಾಹ್ನ 2ರ ವರೆಗೆ.
ವರ್ಷಗಳಿಂದ ಪಾರ್ವತವ್ವ ಎರಡೂ ಕೆಲಸ ಮಾಡುತ್ತಾ ಬಂದಿದ್ದಾರೆ. ಈಗಂತೂ ಇವರದು ಸಾವಯವ ತರಕಾರಿ ಮಾರಾಟ. ಹಾಗಾಗಿ ಖಾಯಂ ಕೊಳ್ಳುಗರೇ ಅಧಿಕ. ‘‘ಮಾರುಕಟ್ಟೆಯಲ್ಲಿ ಬಂದ ಮಂದಿ ಮುಂದಿನ ದಿನ ಇಂಥದ್ದು ಬೇಕು ಅನ್ನೋದಿದೆ. ಕೆಲವರು ಫೋನ್ ಮಾಡಿ ಹೇಳ್ತಾರೆ. ಹೀಗಾಗಿ ಮಂದಿ ಕೇಳಿದ್ದನ್ನಷ್ಟೇ ತುಂಬ್ಕೊಂಡು ಒಯ್ತೆನೆ. ಜಾಸ್ತಿ ಸಮಯ ಅಲ್ಲಿ ಕಾಯ್ದೆ ಕಾಗೋಲ್ಲ. ಎರಡು-ಮೂರು ಗಂಟೆಯಲ್ಲಿ ಒಯ್ದದ್ದೆಲ್ಲಾ ಖಾಲಿ ಆಗುತ್ತೆ ಎಂದು ವಿವರಿಸುತ್ತಾರೆ.
ಅಜ್ಜಪ್ಪನವರ ಬಾಳೆಕಾಯಿ ಹುಡಿಯನ್ನವರು ಬ್ರಾಂಡ್ ಮಾಡಿಲ್ಲ. ಮಾರಲು ಅಂಗಡಿಗಳನ್ನು ಆಶ್ರಯಿಸಿಯೂ ಇಲ್ಲ. ಇವರದು ನೇರ ಗ್ರಾಹಕರಿಗೆ ಪೂರೈಕೆ. ಈವರೆಗಿನ ಎಡೆ ಸಮಯದಲ್ಲಿ ಅಮ್ಮನೇ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್.
ನೇಕಾರರಪೇಟೆಯ ಮಾರುಕಟ್ಟೆಗೆ ಹೋಗದ ಒಂದೆರಡು ದಿನ ಪಾರ್ವತವ್ವನವರದು ಮನೆಮನೆ ವ್ಯಾಪಾರ, ‘‘ಹಳೆ ಗಿರಾಕಿಗಳದೇ 30-40 ಮನೆಗಳಿವೆ. ಹಿಂದೆಲ್ಲಾ ತಲೆ ಮೇಲೆ ಹೊತ್ತುಕೊಂಡೇ ಹೋಗಬೇಕಿತ್ತು. ಈಗ ತಮ್ಮನ ಜತೆ ಬೈಕಲ್ಲಿ ಹೋಗುತ್ತಾರೆ.’’ ಎಂದು ಅಜ್ಜಪ್ಪ ತಿಳಿಸುತ್ತಾರೆ. ಕಳೆದ ವರ್ಷದಿಂದ ಪಾರ್ವತವ್ವರ ತರಕಾರಿ ಬುಟ್ಟಿಯಲ್ಲಿ ಒಂದಷ್ಟು ಬಾಕಾಹು ಪ್ಯಾಕೆಟ್ ಕೂಡ ಇರುತ್ತವೆ. ಇದರ ಉಪಯೋಗ ತಿಳಿಹೇಳಿ ಮಾರುತ್ತಾರೆ. ದಿನಂಪ್ರತಿ 3-4 ಕಿಲೋ ಮಾರಿಹೋಗುತ್ತದೆ. ‘‘ನಾವೂ ಚಪಾತಿಗೆ ಇದನ್ನು ಸೇರಿಸಿಯೇ ತಿಂತೀವಿ. ಛಲೋ ಆಗುತ್ತೆ ಅನ್ನೋದನ್ನೆಲ್ಲಾ ಹೇಳ್ತಿವಿ. ಜನ ಕೊಂಡ್ಕೊರ್ರೀ’’ ಎನ್ನುತ್ತಾರೆ ಪಾರ್ವತವ್ವ.
ಬಾಕಾಹು ಉತ್ಪಾದನೆ ಈ ಕುಟುಂಬಕ್ಕೆ ಒಂದು ಹೊಸ ಭರವಸೆ ಕೊಟ್ಟಿದೆ. ದೂರದ ಊರಿನ ಕೆಲವರು ಇವರ ಉತ್ಪನ್ನದ ಬಗ್ಗೆ ತಿಳಿದು ಕೊರಿಯರಿನಲ್ಲಿ ತರಿಸಿಕೊಂಡದ್ದಿದೆ. ಬಾಳೆ ಕೃಷಿ ಸಾಕಷ್ಟಿದ್ದರೂ, ಸುತ್ತ ಮುತ್ತಲೆಲ್ಲೂ ಈ ಉತ್ಪನ್ನ ಮಾಡಿ ಮಾರುವವರು ಯಾರೂ ಇಲ್ಲ.
(ಕೃಪೆ: ಕೃಷಿ ಮಾಧ್ಯಮ ಕೇಂದ್ರ, ಫಾರ್ಮರ್ ಫಸ್ಟ್ ಟ್ರಸ್ಟ್)







