1.58 ಲಕ್ಷ ಕೋಟಿ ಹೆಚ್ಚುವರಿ ವೆಚ್ಚಕ್ಕಾಗಿ ಸಂಸತ್ತಿನ ಅನುಮೋದನೆ ಕೋರಿದ ಕೇಂದ್ರ

ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚುವರಿಯಾಗಿ 1.07 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸರಕಾರ ಸೋಮವಾರ ಸಂಸತ್ತಿನ ಅನುಮೋದನೆಯನ್ನು ಕೋರಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಲೋಕಸಭೆಯಲ್ಲಿ ಮಂಡಿಸಲಾದ ಅನುದಾನಕ್ಕೆ ಪೂರಕ ಬೇಡಿಕೆಗಳ ಮೂರನೇ ಬ್ಯಾಚ್ ನಂತೆ 1.58 ಲಕ್ಷ ಕೋಟಿ ರೂ.ಗೂ ಅಧಿಕ ಹೆಚ್ಚುವರಿ ವೆಚ್ಚಕ್ಕೆ ಅನುಮೋದನೆ ಪಡೆಯಲಾಗುತ್ತಿದೆ. ಇದರಲ್ಲಿ, ನಿವ್ವಳ ನಗದು ಖರ್ಚಿನ ಪ್ರಸ್ತಾವನೆಗಳು ರೂ. 1.07 ಲಕ್ಷ ಕೋಟಿಗೂ ಹೆಚ್ಚು ಹಾಗೂ ಒಟ್ಟು ಹೆಚ್ಚುವರಿ ವೆಚ್ಚಗಳು, ಸಚಿವಾಲಯಗಳು/ಇಲಾಖೆಗಳ ಉಳಿತಾಯ ಅಥವಾ ವರ್ಧಿತ ರಸೀದಿಗಳ ಮೂಲಕ ಒಟ್ಟು 50,946 ಕೋಟಿ ರೂ.ಇದೆ ಎಂದು ಪಿಟಿಐ ವರದಿ ಮಾಡಿದೆ.
ಇದೇ ವೇಳೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಬಜೆಟ್ ಮಂಡಿಸಿದರು, ಇದು ಸದನದಲ್ಲಿ ಭೋಜನ ವಿರಾಮದ ನಂತರದ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಸಂಸತ್ತಿನಲ್ಲಿ ಬಜೆಟ್ ಅಧಿವೇಶನದ ಎರಡನೇ ಭಾಗ ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾಯಿತು. ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ತ್ರಿಪುರಾ ರಾಜ್ಯಕ್ಕೆ ಸಂಬಂಧಿಸಿದಂತೆ ಕೆಲವು ಸಮುದಾಯಗಳನ್ನು ಎಸ್ಟಿಗಳ ಪಟ್ಟಿಗೆ ಸೇರಿಸುವ ಸಂವಿಧಾನ (ಪರಿಶಿಷ್ಟ ಬುಡಕಟ್ಟುಗಳು) ಆದೇಶ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಮಂಡಿಸುವ ನಿರೀಕ್ಷೆಯಿದೆ. ಮೇಲ್ಮನೆಯಲ್ಲಿ ಅವರು ಜಾರ್ಖಂಡ್ ನ ಸಮುದಾಯಗಳಿಗೆ ಸಂಬಂಧಿಸಿದಂತೆ ಮಸೂದೆಯನ್ನು ಮಂಡಿಸಲಿದ್ದಾರೆ.







