ಉಡುಪಿ: ಉಡಾ ನೂತನ ಅಧ್ಯಕ್ಷರಿಂದ ಅಧಿಕಾರ ಸ್ವೀಕಾರ
ಉಡುಪಿ : ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಮನೋಹರ್ ಕಲ್ಮಾಡಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ಆದಿ ಉಡುಪಿ ಪ್ರಾಧಿಕಾರ ಕಚೇರಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದ ಮನೋಹರ್ ಕಲ್ಮಾಡಿ, ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದ ರೀತಿ ಕೆಲಸ ಮಾಡುತ್ತೇನೆ. ಬಾಕಿ ಇರುವ ಕಡತ ವಿಲೇವಾರಿ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುತ್ತೇನೆ ಎಂದು ತಿಳಿಸಿದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಪ್ರಾಧಿಕಾರದಲ್ಲಿ ಯಾವುದೇ ಅವ್ಯವಹಾರ ಆಗದ ರೀತಿಯಲ್ಲಿ ಸ್ವಚ್ಛವಾದ ಆಡಳಿತ ನೀಡಬೇಕು. ನಗರಾಭಿವೃದ್ಧಿಯ ಕಾರ್ಯವೈಖರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜನರಿಗೆ ಸೇವೆ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಕೂರ್ಮರಾವ್, ನೂತನ ಸದಸ್ಯರುಗಳಾದ ಪ್ರವೀಣ್ ಕುಮಾರ್ ಶೆಟ್ಟಿ, ಕಿಶೋರ್ ಕುಮಾರ್, ಸುಮ ನಾಯಕ್, ಮಾಲತಿ ಸುಧಾಕರ್, ಯೋಗೀಶ್ ಚಂದ್ರ, ಮಾಜಿ ಅಧ್ಯಕ್ಷ ರಾಘವೇಂದ್ರ ಕಿಣಿ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಯಶ್ಪಾಲ್ ಸುವರ್ಣ ಮತ್ತಿತರು ಉಪಸ್ಥಿತರಿದ್ದರು.