ಸಮಾಜದ ಏಕತೆ ವಿಶ್ವದ ಎಲ್ಲಾ ಧರ್ಮಗಳ ಮೂಲ ಉದ್ದೇಶ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
ಕಾರ್ಕಳ ಉತ್ಸವದ ಐದನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ
ಕಾರ್ಕಳ : ಸಮಾಜದ ಏಕತೆಯನ್ನು ಗಟ್ಟಿಗೊಳಿಸುವುದು ವಿಶ್ವದ ಎಲ್ಲಾ ಧರ್ಮಗಳ ಮೂಲ ಉದ್ದೇಶವಾಗಿದೆ. ಸಮಾಜವನ್ನು ಒಗ್ಗೂಡಿಸುವಲ್ಲಿ ಧರ್ಮಕ್ಕೆ ಮಹತ್ವದ ಪಾತ್ರವಿದೆ. ಧರ್ಮವು ಸಾಮಾಜಿಕ, ಆಧ್ಯಾತ್ಮಿಕ ರೂಪದಲ್ಲಿ ಸಮಾಜವನ್ನು ಪ್ರಭಾವಿತಗೊಳಿಸುತ್ತದೆ ಎಂದು ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ.
ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಉಡುಪಿ ಇವುಗಳ ವತಿಯಿಂದ ಕಾರ್ಕಳದಲ್ಲಿ ನಡೆದಿರುವ ಹತ್ತುದಿನಗಳ ಭಾಷೆ- ಸಂಸ್ಕೃತಿ- ಕಲೆಯ ಸಂಭ್ರಮದ ಕಾರ್ಕಳ ಉತ್ಸವದ ಐದನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಂದು ಸಂಜೆ ಗಾಂಧಿ ಮೈದಾನದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭಾರತದಲ್ಲಿ ಸರ್ವ ಧರ್ಮ ಸಮನ್ವಯತೆ ಇದೆ. ಇಲ್ಲಿ ಎಲ್ಲಾ ಧರ್ಮಗಳನ್ನು ಗೌರವಿಸಲಾಗುತ್ತದೆ. ವೈವಿಧ್ಯತೆಯಲ್ಲಿ ಏಕತೆ ಇದೆ. ವಿಶ್ವ ಬಂಧುತ್ವ, ವಿಶ್ವ ಶಾಂತಿ, ಸಮಾನತೆ ನಮ್ಮ ಹೆಗ್ಗುರುತು. ಭಾರತದ ಜನ ಎಲ್ಲೇ ಇದ್ದರೂ ಅಲ್ಲಿ ಈ ಭಾರತೀಯ ಸಂಸ್ಕೃತಿ ಕಂಡುಬರುತ್ತದೆ ಎಂದು ರಾಜ್ಯಪಾಲರು ನುಡಿದರು.
ಧರ್ಮ ಜನರನ್ನು ಧರ್ಮ, ಸಾಮಾಜಿಕ, ಆಧ್ಯಾತ್ಮಿಕವಾಗಿ ಪ್ರಭಾವಿತ ಗೊಳಿಸುತ್ತದೆ. ಧರ್ಮ ಸಮಾಜದಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸುತ್ತದೆ. ಭಗವಾನ್ ಬುದ್ಧ ಬಹುಜನ ಹಿತಾಯ, ಬಹುಜನ ಸುಖಾಯ: ಸಂದೇಶ ನೀಡಿದ್ದು, ಧರ್ಮಚಕ್ರಕ್ಕೆ ಚಾಲನೆ ನೀಡಿದ್ದರು. ಪಂಚಶೀಲ ಸಿದ್ಧಾಂತದ ಪ್ರವರ್ತಕ, ಜೈನ ಧರ್ಮದ 24ನೇ ತೀರ್ಥಂಕರ ಭಗವಾನ್ ಮಹಾವೀರ ಅಹಿಂಸೆಯ ಪ್ರತಿಪಾದಕರಾಗಿದ್ದರು. ಸತ್ಯ, ಅಹಿಂಸೆ, ತ್ಯಾಗದ ಉಪದೇಶವನ್ನು ಇಡೀ ವಿಶ್ವಕ್ಕೆ ನೀಡಿ ಸರಿಯಾದ ಮಾರ್ಗದಲ್ಲಿ ಜನರು ಸಾಗುವಂತೆ ಮಾಡಿದ್ದರು ಎಂದರು.
ಭಾರತ ಹಾಗೂ ಕರ್ನಾಟಕದ ಸಂಸ್ಕೃತಿ ಅತ್ಯಂತ ಪ್ರಾಚೀನವಾದುದು. ಭಾರತೀಯ ಸಂಸ್ಕೃತಿಯನ್ನು ದುರ್ಬಲಗೊಳಿಸುವ ಹಲವು ಪ್ರಯತ್ನಗಳು ಇತಿಹಾಸದಲ್ಲಿ ನಡೆದರೂ, ಇಂದೂ ಸಹ ಅದು ಗಟ್ಟಿಯಾಗಿ ಉಳಿದಿರುವುದಲ್ಲದೇ ವಿಶ್ವದಾದ್ಯಂತ ಹೆಚ್ಚು ಹೆಚ್ಚು ವ್ಯಾಪಿಸುತ್ತಿದೆ. ನಾವು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇವೆ ಎಂದರು.
ಭಾರತೀಯ ಸಂಸೃತಿ, ಕಲೆ, ಇತಿಹಾಸವನ್ನು ಜೀವಂತವಿರಿಸಲು ,ಸಾಮಾಜಿಕ ಸಾಮರಸ್ಯ ಉಳಿಸಲು ಕಾರ್ಕಳದ ಶಾಸಕರು ಈ ಉತ್ಸವವನ್ನು ಆಯೋಜಿಸಿದ್ದು, ಇಂಥ ಉತ್ಸವವನ್ನು ದೇಶಾದ್ಯಂತ ಆಯೋಜಿಸ ಬೇಕಾದ ಅಗತ್ಯವಿದೆ. ಎಲ್ಲಾ ರಾಜ್ಯಗಳಲ್ಲೂ ಇಂಥ ಕಾರ್ಯಕ್ರಮ ನಡೆಯಬೇಕಾಗಿದೆ ಎಂದು ಗೆಹ್ಲೋಟ್ ಅಭಿಪ್ರಾಯ ಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಮಾತನಾಡಿ, ಭಾರತೀಯ ವಿಚಾರಪದ್ಧತಿ ಇರುವುದೇ ಕಲೆಯ ಆರಾಧನೆ ಮೂಲಕ, ಸಂಸ್ಕೃತಿ ಆರಾಧನೆಯ ಮೂಲಕ. ಭಾರತೀಯ ಸಂಸ್ಕೃತಿಯ ನೆಲೆಗಟ್ಟೇ ಸಂಸ್ಕೃತಿ. ಸಾವಿರಾರು ದಾರ್ಶನಿಕರು ಕಲೆಯ ಕೃಷಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಗತ್ತಿನ ಸಾವಿರಾರು ಮಂದಿ ಕೇವಲ ಭಾರತದ ಸಂಪತ್ತನ್ನು ನೋಡಿ ಬರಲಿಲ್ಲ. ಕಲೆ, ಸಂಸ್ಕೃತಿ, ಜ್ಞಾನವನ್ನು ತಿಳಿದುಕೊಳ್ಳಲು ಬಂದಿದ್ದರು ಎಂದು ನುಡಿದರು.
ಕರ್ನಾಟಕದ ಹೊಯ್ಸಳರ, ಕದಂಬರ ಇತಿಹಾಸ, ಗಂಗರ, ಹಂಪೆಯ ವಿಜಯನಗರದ ಇತಿಹಾಸವನ್ನು ಜಗತ್ತಿನ ಜನ ನೋಡಿ ಭಾರತದ ಶ್ರೀಮಂತಿಕೆಗೆ ಬೆರಗಾಗಿದ್ದಾರೆ. ಅದೇ ರೀತಿ ಶ್ರೀಮಂತಿಕೆ ಕಾರ್ಕಳದ ಬೈರವರಸರ ಇತಿಹಾಸ ದಲ್ಲೂ ಕಂಡುಬರುತ್ತದೆ. ಕಾರ್ಕಳದ ಕಲೆ, ಇತಿಹಾಸದ ಶ್ರೀಮಂತಿಕೆಯನ್ನು ರಾಜ್ಯದ ಜನತೆಗೆ ತೋರಿಸಲು ಈ ಉತ್ಸವ ಆಯೋಜಿಸಲಾಗಿದೆ ಎಂದರು.
ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳಾದ ಡಾ.ಎನ್. ಮಂಜುಳಾ, ಕಾರ್ಕಳ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಕನ್ನಡದ ಹಿರಿಯ ಸಾಹಿತಿ, ಕಾದಂಬರಿಕಾರ ಡಾ.ನಾ.ಮೊಗಸಾಲೆ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅತಿಥಿಗಳನ್ನು ಸ್ವಾಗತಿಸಿದರು.