ಮೈಸೂರು: ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸದೆ ಹೊರಗಡೆ ನಿಲ್ಲಿಸಿದ ಶಾಲಾಡಳಿತ; ಆರೋಪ
ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರ ಒತ್ತಾಯ

ಸಾಂದರ್ಭಿಕ ಚಿತ್ರ
ಮೈಸೂರು,ಮಾ.14: ಖಾಸಗಿ ಶಾಲೆಯೊಂದು ಶಾಲಾ ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸದೆ ಶಾಲಾ ಆವರಣದಲ್ಲಿ ಬಿಸಿಲಿನಲ್ಲೇ ನಿಲ್ಲಿಸಿರುವ ಅಮಾನವೀಯ ಘಟನೆಯೊಂದು ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ನಡದಿದೆ.
ಕೆ.ಆರ್.ನಗರದ ವಾಸವಿ ಸೆಂಟ್ರಲ್ ಸ್ಕೂಲ್ ನ ಆಡಳಿತ ಮಂಡಳಿ ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಸುಮಾರು 20 ರಿಂದ 25 ವಿದ್ಯಾರ್ಥಿಗಳನ್ನು ಸೋಮವಾರ ಪ್ರಾರಂಭವಾಗಿರುವ ವಾರ್ಷಿಕ ಪರೀಕ್ಷೆಗೆ ಅವಕಾಶ ಮಾಡಿಕೊಡದೆ ಬಿಸಿಲಿನಲ್ಲೇ ಮೂರು ಮೂರು ಗಂಟೆಗಳ ವರೆಗೆ ನಿಲ್ಲಿಸಿ ಮಕ್ಕಳನ್ನು ಅವಮಾನಗೊಳಿಸಿದ್ದಾರೆ.
ಈ ಶಾಲೆ ಒಂದನೇ ತರಗತಿಯಿಂದ ಹತ್ತನೆ ತರಗತಿವರೆಗೆ ವಿದ್ಯಾಭ್ಯಾಸ ನೀಡುತ್ತಿದ್ದು, ಇಂದು ಒಂದ ನೇ ತರಗತಿಯಿಂದ ಏಳನೇ ತರಗತಿಗೆ ವಾರ್ಷಿಕ ಪರೀಕ್ಷೆ ಆರಂಭಿಸಿದೆ. ಆದರೆ ವಿದ್ಯಾರ್ಥಿಗಳು ಶಾಲಾ ಕಟ್ಟಡ ಅಭಿವೃದ್ಧಿಯ ಸುಮಾರು 25 ಸಾವಿರ ರೂ. ಶುಲ್ಕ ಪಾವತಿಸಿಲ್ಲ ಎಂದು ಹೊರಗೆ ನಿಲ್ಲಿಸಿದ್ದಾರೆ.
ಎಂದಿನಂತೆ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಶಾಲಾ ಪ್ರೈಯರ್ ಮುಗಿದ ನಂತರ ಶುಲ್ಕ ಕಟ್ಟಿಲ್ಲ ಎಂದು ಹೆಸರಿಸಿ ನೀವು ತರಗತಿಗೆ ಹೋಗಿ ಪರೀಕ್ಷೆ ಬರೆಯದಂತೆ ಸೂಚಿಸಿ ಬೆಳಿಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಶಾಲೆಯ ಹೊರಗೆ ಕಳುಹಿಸಿದ್ದಾರೆ. ಇದರಿಂದ ಧಿಕ್ಕು ತೋಚದ ವಿದ್ಯಾರ್ಥಿಗಳು ಇತ್ತ ಮನೆಗೂ ತೆರಳದೆ ತರಗತಿಗೂ ಹಾಜರಾಗದೆ ಬಿಸಿಲಿನಲ್ಲಿಯೇ ಕುಳಿತು ಆತಂಕ್ಕಕ್ಕೊಳಗಾಗಿದ್ದಾರೆ.
ವಿಷಯ ತಿಳಿದ ಕೆಲವು ಪೋಷಕರು ಶಾಲೆಗೆ ಆಗಮಿಸಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟಿಸಿದ್ದಾರೆ. ನಾವು ಈಗಾಗಲೇ ನಿಗದಿ ಪಡಿಸಿರುವ 35 ಸಾವಿರ ರೂ. ಶುಲ್ಕ ಪಾವತಿಸಿದ್ದೇವೆ. ನಿಮ್ಮ ಶಾಲಾ ಕಟ್ಟಡ ಅಭಿವೃದ್ಧಿ ಶುಲ್ಕ ಮಾತ್ರ ಬಾಗಿ ಉಳಿಸಿಕೊಂಡಿದ್ದೇವೆ. ನಾವು ಅದನ್ನು ಕಟ್ಟುವುದಿಲ್ಲ ಎಂದು ಹೇಳುತ್ತಿಲ್ಲ, ನಮಗೆ ಸ್ವಲ್ಪ ಕಾಲಾವಕಾಶ ಬೇಕು ಎಂದು ಈಗಾಗಲೇ ಹೇಳಿದ್ದೇವೆ. ಆದರೂ ನೀವು ನಮ್ಮ ಮಕ್ಕಳನ್ನು ಈ ರೀತಿ ಹೊರಗೆ ನಿಲ್ಲಿಸಿರುವುದು ಅತ್ಯಂತ ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡುವುದಾಗಿ ಎಂದು ಹೇಳಿದ್ದರೂ ಕ್ಯಾರೆ ಎನ್ನದ ಆಡಳಿತ ಮಂಡಳಿ ನೀವು ಯಾರಿಗೆ ಬೇಕಾದರೂ ಹೇಳಿಕೊಳ್ಳಿ ಎಂಬ ಉಡಾಫೆ ಉತ್ತರವನ್ನು ನೀಡಿದ್ದಾರೆ.
ನಂತರ ಕೆಲವು ಪೋಷಕರುಗಳು ದೂರನ್ನು ನೀಡಲು ಬಿಇಓ ಕಚೇರಿಗೆ ತೆರಳಿದ್ದರಾದರೂ ಕೆಲಸದ ನಿಮಿತ್ತ ಬಿಇಓ ಬೆಂಗಳೂರಿಗೆ ಹೋಗಿದ್ದರಿಂದ ಅವರ ಅಧೀನ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಬಿಇಓ ಅವರು ಬಂದ ನಂತರ ಶಾಲೆ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಕೆ.ಆರ್.ನಗರದ ವಾಸವಿ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸದೆ ಹೊರಗೆ ಕಳುಹಿಸಿರುವ ಬಗ್ಗೆ ಕೆಲವು ಪೋಷಕರುಗಳು ನನ್ನ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಬಿಇಓ ಅವರಿಗೆ ವರದಿ ನೀಡುವಂತೆ ಕೇಳಿದ್ದೇನೆ. ಮಂಗಳವಾರ ಅವರು ವರದಿ ನೀಡಲಿದ್ದು, ಅವರ ವರದಿ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
-ರಾಮಚಂದ್ರರಾಜೇ ಅರಸ್, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು.
ನಾವು ಶಾಲಾ ಶುಲ್ಕ ಕಟ್ಟುವುದಿಲ್ಲ ಎಂದು ಹೇಳಿಲ್ಲ, ಆದರೂ ನಮ್ಮ ಮಕ್ಕಳನ್ನು ಈ ರೀತಿ ಬಿಸಿಲಿನಲ್ಲಿ ಕೂರಿಸಿರುವುದು ಎಷ್ಟು ಸರಿ. ನಮ್ಮ ಮಕ್ಕಳು ಹೊರಗೆ ಕುಳಿತಿರುವ ಪರಿಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ. ಇಂತಹ ಅಮಾನವೀಯ ಘಟನೆಯನ್ನು ಶಾಲಾ ಆಡಳಿತ ಮಂಡಳಿ ನಡೆಸಿದ್ದು, ಕೂಡಲೇ ಇವರ ಬಗ್ಗೆ ಕ್ರಮ ಕೈಗೊಳ್ಳಬೇಕು.
- ಹೆಸರು ಹೇಳಲಿಚ್ಚಿಸಿದ ಪೋಷಕರು.







