ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ: 4,317 ಶಿಕ್ಷಕರ ವಿರುದ್ಧ ಕ್ರಮ; ಸಚಿವ ಬಿ.ಸಿ.ನಾಗೇಶ್

ಬೆಂಗಳೂರು, ಮಾ.14: ಹಿಂದಿನ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಮಾಡಿದ 4,317 ಶಿಕ್ಷಕರನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಸೋಮವಾರ ವಿಧಾನಪರಿಷತ್‍ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 6 ರಿಂದ 10 ಅಂಕ ವ್ಯತ್ಯಾಸ ಮಾಡಿದ 3,566 ಉತ್ತರ ಪತ್ರಿಕೆಗಳಿವೆ. 11, 15, 16 ರಿಂದ 20 ಮತ್ತು ಅದಕ್ಕೂ ಹೆಚ್ಚಿನ ಅಂಕಗಳಲ್ಲಿ ವ್ಯತ್ಯಾಸವಾಗಿರುವ 1,260 ಪತ್ರಿಕೆಗಳಿವೆ. ಇಂತಹ ಶಿಕ್ಷಕರಿಗೆ ಕ್ರಮ ಕೈಗೊಳ್ಳುವ ಸಂಬಂಧ ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಿದರು.
6 ರಿಂದ 10 ಅಂಕಗಳನ್ನು ವ್ಯತ್ಯಾಸ ಮಾಡಿದ ಶಿಕ್ಷಕರಿಗೆ ಎಚ್ಚರಿಕೆ ನೀಡಲು ನಿರ್ಧರಿಸಲಾಗಿದೆ. 11 ರಿಂದ 20 ಅಂಕಗಳನ್ನು ವ್ಯತ್ಯಾಸ ಮಾಡಿದ ಶಿಕ್ಷಕರಿಗೆ ಮುಂದಿನ 2 ಪರೀಕ್ಷೆಗಳ ಮೌಲ್ಯಮಾಪನಕ್ಕೆ ಅವಕಾಶ ನೀಡದಂತೆ ಅಮಾನತು ಮಾಡಲಾಗಿದೆ. ಜತೆಗೆ 20 ಕ್ಕೂ ಹೆಚ್ಚು ಅಂಕಗಳನ್ನು ವ್ಯತ್ಯಾಸ ಮಾಡಿದ ಶಿಕ್ಷಕರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಎಸೆಸೆಲ್ಸಿ ಪರೀಕ್ಷೆಯಲ್ಲಿ 19,826 ಅರ್ಜಿಗಳು ಮರು ಮೌಲ್ಯಮಾಪನಕ್ಕಾಗಿ ಬಂದಿವೆ. ಇದರಲ್ಲಿ 6ಕ್ಕಿಂತ ಕಡಿಮೆ ವ್ಯತ್ಯಾಸವಿರುವ 15,591 ಪ್ರಕರಣಗಳಿದ್ದು, ಈ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ನುಡಿದರು.
6 ಕ್ಕಿಂತ ಹೆಚ್ಚು ಅಂಕ ವ್ಯತ್ಯಾಸವಿರುವ 4,235 ಸಂಖ್ಯೆಯಲ್ಲಿದ್ದು, ಈ ರೀತಿಯ ವ್ಯತ್ಯಾಸಗಳನ್ನು ಮರು ಮೌಲ್ಯಮಾಪನದಲ್ಲಿ ಸರಿಪಡಿಸಲಾಗಿದೆ. ಜತೆಗೆ ಈ ರೀತಿಯ ಅಸಮರ್ಪಕ ಮೌಲ್ಯಮಾಪನ ಮಾಡಿದ ಶಿಕ್ಷಕರಿಗೆ ದಂಡ ವಿಧಿಸಲು ಕೂಡಾ ಕ್ರಮ ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದರು.







