ಭಾರತ ರಷ್ಯದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಸಾಧ್ಯತೆ: ಅಧಿಕಾರಿಗಳು

ಹೊಸದಿಲ್ಲಿ,ಮಾ.14: ತೈಲ ಮತ್ತು ಇತರ ಸರಕುಗಳನ್ನು ರಿಯಾಯಿತಿ ದರಗಳಲ್ಲಿ ಖರೀದಿಸಲು ಅವಕಾಶವೊಂದನ್ನು ರಷ್ಯವು ಭಾರತದ ಮುಂದಿರಿಸಿದೆ. ಈ ಕೊಡುಗೆಯನ್ನು ಸದ್ಯ ಕೇಂದ್ರ ಸರಕಾರವು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ
ತನ್ನ ತೈಲ ಅಗತ್ಯದ ಶೇ.80ರಷ್ಟನ್ನು ಆಮದು ಮಾಡಿಕೊಳ್ಳುವ ಭಾರತವು, ಸಾಮಾನ್ಯವಾಗಿ ಶೇ.2ರಿಂದ ಶೇ.3ರಷ್ಟು ಪೂರೈಕೆಯನ್ನು ರಷ್ಯದಿಂದ ಖರೀದಿಸುತ್ತದೆ. ಆದರೆ ಈವರೆಗೆ ತೈಲದರಗಳು ಶೇ.40ರಷ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಷ್ಯದಿಂದ ಖರೀದಿ ಪ್ರಮಾಣವನ್ನು ಹೆಚ್ಚಿಸುವುದು ತನ್ನ ಏರುತ್ತಿರುವ ಆಮದು ಪಾವತಿಯನ್ನು ಕಡಿಮೆಗೊಳಿಸಲು ನೆರವಾಗಬಹುದೇ ಎನ್ನುವುದನ್ನು ಸರಕಾರವು ಪರಿಶೀಲಿಸುತ್ತಿದೆ.
‘ಭಾರೀ ರಿಯಾಯಿತಿಯಲ್ಲಿ ತೈಲ ಮತ್ತು ಇತರ ಸರಕುಗಳ ಮಾರಾಟದ ಕೊಡುಗೆಯನ್ನು ರಷ್ಯವು ನಮ್ಮ ಮುಂದಿರಿಸಿದೆ ಮತ್ತು ಅದನ್ನು ಒಪ್ಪಿಕೊಳ್ಳಲು ನಾವು ಸಂತೋಷಿಸುತ್ತೇವೆ. ಆದರೆ ಟ್ಯಾಂಕರ್,ವಿಮೆ ರಕ್ಷಣೆ ಮತ್ತು ತೈಲ ಮಿಶ್ರಣದಂತಹ ಕೆಲವು ಸಮಸ್ಯೆಗಳಿದ್ದು,ಅವು ಬಗೆಹರಿದ ಬಳಿಕ ರಷ್ಯದ ಕೊಡುಗೆಯನ್ನು ನಾವು ಸ್ವೀಕರಿಸುತ್ತೇವೆ’ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ರಷ್ಯದ ವಿರುದ್ಧ ಹೇರಲಾಗಿರುವ ನಿರ್ಬಂಧಗಳಿಂದಾಗಿ ಆ ರಾಷ್ಟ್ರದಿಂದ ತೈಲವನ್ನು ಖರೀದಿಸಲು ಹೆಚ್ಚಿನ ದೇಶಗಳು/ಅಂತರರಾಷ್ಟ್ರೀಯ ತೈಲ ಕಂಪನಿಗಳು ಹಿಂಜರಿಯುತ್ತಿವೆ,ಆದರೆ ಭಾರತವು ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಈ ನಿರ್ಬಂಧಗಳು ತಡೆಯುವುದಿಲ್ಲ ಎಂದು ಅವರು ಹೇಳಿದರು.







