ವಿಷದ ವಾತಾವರಣದಲ್ಲಿ ವಿತ್ತೀಯ ಬೆಳವಣಿಗೆ ಎಂದಿಗೂ ಸಾಧ್ಯವಿಲ್ಲ: ಯು.ಟಿ.ಖಾದರ್

ಬೆಂಗಳೂರು, ಮಾ.14: ವಿಷದ ವಾತಾವರಣದಲ್ಲಿ ವಿತ್ತೀಯ ಬೆಳವಣಿಗೆ ಎಂದಿಗೂ ಸಾಧ್ಯವಿಲ್ಲ. ರಕ್ತದ ಮಡುವಿನಲ್ಲಿ ಆರ್ಥಿಕತೆ ಎಂದಿಗೂ ಸಾಧ್ಯವಿಲ್ಲ. ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುವ ಮುಂಚೆ, ಸರಕಾರ ಪ್ರತಿಯೊಂದು ಜಿಲ್ಲೆಯಲ್ಲಿ ಸಾಮರಸ್ಯ ಸಮಾವೇಶಗಳನ್ನು ಮಾಡಬೇಕು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಹೇಳಿದರು.
ಸೋಮವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಲಾ, ಕಾಲೇಜುಗಳಲ್ಲಿ ಆದ ಸಮಸ್ಯೆಯನ್ನು ಮಾಧ್ಯಮಗಳ ಮೂಲಕ ನೋಡಿದ ಯಾರೊಬ್ಬರೂ ತಮ್ಮ ಮಕ್ಕಳನ್ನು ನಮ್ಮ ರಾಜ್ಯಕ್ಕೆ ಶಿಕ್ಷಣಕ್ಕೆ ಕಳುಹಿಸಿಕೊಡುವುದಿಲ್ಲ. ಇದರಿಂದ, ನಮ್ಮ ರಾಜ್ಯದ ಜನರಿಗೆ ನಷ್ಟ. ಕಾನೂನು ಸುವ್ಯವಸ್ಥೆ ಸರಿದಾರಿಗೆ ಬರಬೇಕು ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಕರ್ನಾಟಕ ಹೊತ್ತಿ ಉರಿಯುತ್ತಿದೆ, ದೊಡ್ಡ ಆಘಾತದ ಪರಿಸ್ಥಿತಿಯಿದೆ ಎನ್ನುತ್ತಿದ್ದೀರಾ. ಕಾನೂನು ಸುವ್ಯವಸ್ಥೆ ಎಲ್ಲಿ ಹಾಳಾಗಿದೆ ಎಂದು ತಿಳಿಸಿ. ನೀವು ಸುಮ್ಮನೆ ಏನುಬೇಕಾದರೂ ಹೇಳಿಕೊಂಡು ಹೋಗಬಹುದೆ? ಇದಕ್ಕೆಲ್ಲ ಯಾರು ಜವಾಬ್ದಾರಿ. ತೆಗೆಯಿರಿ ರೆಕಾರ್ಡ್, ಹೇಳ್ರೀ ನೀವು ಗೃಹ ಸಚಿವರು ಯಾರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದ್ದು. ಸರಕಾರ ರಾಜ್ಯದಲ್ಲಿನ ಪರಿಸ್ಥಿತಿ ಹಾಳು ಮಾಡಿದೆಯೇ? ಎಂದು ಕಿಡಿಗಾರಿದರು.
ಈ ಸಂದರ್ಭದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. ರಾಜ್ಯದಲ್ಲಿನ ಪರಿಸ್ಥಿತಿ ಹಾಳಾಗಲು ಯಾರು ಜವಾಬ್ದಾರರು ಎಂದರೆ ಆಡಳಿತದಲ್ಲಿ ಇರುವ ನೀವೆ ಜವಾಬ್ದಾರರು. ಶಿವಮೊಗ್ಗದಲ್ಲಿ 144 ಸೆಕ್ಷನ್ ಹಾಕಿದರೆ ಅದನ್ನು ನಿಮ್ಮ ಹಿರಿಯ ಸಚಿವರೇ ಉಲ್ಲಂಘನೆ ಮಾಡುತ್ತಾರೆ. ಇಲ್ಲಿ ಸರಕಾರ ಇದೆಯಾ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಂತರ ಮಾತು ಮುಂದುವರೆಸಿದ ಖಾದರ್, ಸರಕಾರ ನಡೆಸುವುದು ನೀವು, ಸಮಸ್ಯೆ ಮಾಡಿದವರಿಗೆ ಕ್ರಮ ಕೈಗೊಳ್ಳಿ. ವಿರೋಧ ಪಕ್ಷದ ಮೇಲೆ ಜವಾಬ್ದಾರಿ ಎಂದರೆ ಸಾಧ್ಯವೇ? ಶಿವಮೊಗ್ಗದಲ್ಲಿ 144 ಸೆಕ್ಷನ್ ಉಲ್ಲಂಘನೆ ಮಾಡಿ ಮಂತ್ರಿಗಳು ಮೆರವಣಿಗೆಯಲ್ಲಿ ಹೋಗಿದ್ದಕ್ಕೆ ಅಲ್ಲಿ ಗಲಾಟೆಯಾಗಿ, ಗುಂಪು ಘರ್ಷಣೆ ಆಗಿದೆ. ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿಯಾಗಿದೆ. ಅದೇ ರೀತಿ, ಆಳಂದದಲ್ಲಿ ಕೇಂದ್ರ ಸಚಿವರು 144 ಸೆಕ್ಷನ್ ಉಲ್ಲಂಘನೆ ಮಾಡುತ್ತಾರೆ ಎಂದು ಟೀಕಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಆಳಂದದಲ್ಲಿ ಐದು ಜನ ಶಿವನ ದೇವಸ್ಥಾನಕ್ಕೆ ಹೋದರೆ, ಸಾವಿರಾರು ಜನರನ್ನು ಸೇರಿಸಿ ಕಲ್ಲು ಹೊಡೆಸಿದ್ದು ಯಾರು? ಎಂದು ಪ್ರಶ್ನಿಸಿದರು.
ನಂತರ ಮಾತು ಮುಂದುವರೆಸಿದ ಖಾದರ್, ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹರ್ಷನ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ನೀಡಿದ್ದಾರೆ. ಆದರೆ, ವಿಜಯಪುರದಲ್ಲಿ ಇದೇ ರೀತಿ ಹತ್ಯೆಗೀಡಾದ ಸಮೀರ್ ಶಹಪುರ, ಬೆಳ್ತಂಗಡಿಯಲ್ಲಿ ಬಜರಂಗದಳದ ಕಾರ್ಯಕರ್ತರಿಂದ ಹತ್ಯೆಗೀಡಾದ ದಲಿತ ಯುವಕ ದಿನೇಶ್, ಕೊಡಗಿನ ಹುತಾತ್ಮ ಯೋಧ ಅಲ್ತಾಫ್ ಅಹ್ಮದ್ ಕುಟುಂಬಕ್ಕೆ ಈವರೆಗೆ ಒಂದು ನಯಾಪೈಸೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೀವಂತವಾಗಿದ್ದಾಗಲೂ ತಾರತಮ್ಯ, ಸತ್ತ ನಂತರವೂ ತಾರತಮ್ಯವೇ? ಅಧಿಕಾರ, ಜೀವನ ಯಾರಿಗೂ ಶಾಶ್ವತ ಅಲ್ಲ, ಪರಿಹಾರ ನೀಡುವ ವಿಚಾರದಲ್ಲಿಯೂ ತಾರತಮ್ಯವಿಲ್ಲದೆ ಕ್ರಮ ಕೈಗೊಳ್ಳಿ ಎಂದು ಖಾದರ್ ಆಗ್ರಹಿಸಿದರು.







