ಮಂಗಳೂರು: ಗಾಂಧಿ ಶಿಲ್ಪಬಜಾರ್ (ಕರಕುಶಲ ಮೇಳ)ಗೆ ಚಾಲನೆ

ಮಂಗಳೂರು : ಕೇಂದ್ರ ಸರಕಾರದ ಜವಳಿ ಮಂತ್ರಾಲಯ-ಅಭಿವೃದ್ದಿ ಆಯುಕ್ತರ ಕಚೇರಿ ಹಾಗೂ ಮಂಗಳೂರಿನ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ವುಡ್‌ಲ್ಯಾಂಡ್ಸ್ ಹೋಟೆಲ್ ಆವರಣದಲ್ಲಿ ನಡೆಯುವ ಗಾಂಧಿ ಶಿಲ್ಪಬಜಾರ್ (ಕರಕುಶಲ ಮೇಳ)ಗೆ ಸೋಮವಾರ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಇಂತಹ ಮೇಳಗಳನ್ನು ಹಮ್ಮಿಕೊಳ್ಳುವ ಮೂಲಕ ಕರಕುಶಲ ವಸ್ತುಗಳಿಗೆ ಉತ್ತೇಜನ ಹಾಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದರು.
ದೇಶದ ವಿವಿಧ ಭಾಗಗಳ ನುರಿತ ಕರಕುಶಲ ಕಲಾವಿದರು ತಯಾರಿಸಿದ ಆಕರ್ಷಣಿಯ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ, ಮೇಳಗಳನ್ನು ಆಯೋಜಿಸುವ ಮೂಲಕ ಸರಕಾರಗಳು ಕುಶಲಕರ್ಮಿಗಳಿಗೆ ಮಾರುಕಟ್ಟೆಯ ಸೌಲಭ್ಯ ನೀಡುತ್ತಿವೆ, ದುಬೈನಲ್ಲೂ ಕೂಡ ಕರಕುಶಲ ಮೇಳಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ದಿ ನಿಗಮದ (ಕಿಯೋನಿಕ್ಸ್) ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿದರು.
ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ, ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಆಯುಕ್ತ ವೆಂಕಟೇಶ್ ಜಿ., ಕೇಂದ್ರ ಸರಕಾರದ ಕರಕುಶಲ ಹಿರಿಯ ಸಹಾಯಕ ನಿರ್ದೇಶಕ ಎಸ್.ಆರ್. ಮಸ್ರಮ್, ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಬಾಬು ದೇವಾಡಿಗ, ನಿತಿನ್, ಡಾ.ಸೂರ್ಯಪ್ರಕಾಶ್ ಶೆಟ್ಟಿ, ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.







