ಅರೆಕಾಲಿಕ ಸ್ವಯಂ ಸೇವಕರಿಂದ ಅರ್ಜಿ ಆಹ್ವಾನ
ಮಂಗಳೂರು : ಜನ ಸಾಮಾನ್ಯರಿಗೆ ಅವಶ್ಯ ಕಾನೂನು ಸಹಾಯ ಒದಗಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ 50 ಅರೆಕಾಲಿಕ ಕಾನೂನು ಸ್ವಯಂ ಸೇವಕರ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರೆಕಾಲಿಕ ಕಾನೂನು ಸ್ವಯಂ ಸೇವಕರಾಗಿ ಆಯ್ಕೆಗೊಂಡವರಿಗೆ ನಿಗದಿತ ವೇತನ ಅಥವಾ ಸಂಭಾವನೆ ಇಲ್ಲ. ಸಮಾಜದ ದುರ್ಬಲರಿಗೆ ಮತ್ತು ನೊಂದವರಿಗೆ ಸೇವೆ ಒದಗಿಸುವ ಮನೋಭಾವ ಹೊಂದಿರುವ ಮತ್ತು ಕಾನೂನು ಸೇವಾ ಪ್ರಾಧಿಕಾರದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಿದ್ಧರಿರುವ ವ್ಯಕ್ತಿಗಳನ್ನು ಮಾತ್ರ ಅರೆಕಾಲಿಕ ಕಾನೂನು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲು ಆಯ್ಕೆ ಮಾಡಲಾಗುತ್ತದೆ.
ಕಾನೂನು ಸೇವಾ ಪ್ರಾಧಿಕಾರದ ಚಟುವಟಿಕೆಗಳಲ್ಲಿ ಭಾಗಿಯಾದ ದಿನಗಳಿಗೆ ಸಂಬಂಧಿಸಿದಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದವರು ನಿಗದಿಪಡಿಸುವ ಗೌರವ ಧನವನ್ನು ಮಾತ್ರ ನೀಡಲಾಗುವುದು. ಹಾಲಿ ಶಿಕ್ಷಕರು, ನಿವೃತ್ತ ಶಿಕ್ಷಕರು, ನಿವೃತ್ತ ಸರಕಾರಿ ನೌಕರರು, ಹಿರಿಯ ನಾಗರಿಕರು, ಎಂಎಸ್‌ಡ್ಲಬ್ಲ್ಯು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಪದವಿ ಪೂರ್ವ ಅಥವಾ ಪದವಿ ವಿದ್ಯಾರ್ಥಿಗಳು, ಕಾನೂನು ಪದವಿ ವಿದ್ಯಾರ್ಥಿಗಳು, ಸಮಾಜ ಸೇವೆಯಲ್ಲಿ ತೊಡಗಿರುವ ರಾಜಕೀಯೇತರ ಸಂಘ ಸಂಸ್ಥೆಗಳ ಸದಸ್ಯರು, ಸ್ವ-ಸಹಾಯ ಗುಂಪುಗಳ ಸದಸ್ಯರು, ವಿದ್ಯಾವಂತರು ಅರೆಕಾಲಿಕ ಕಾನೂನು ಸ್ವಯಂಸೇವಕ ರಾಗಲು ಅರ್ಹತೆ ಹೊಂದಿರುತ್ತಾರೆ.
ಕಾನೂನು ಸೇವಾ ಪ್ರಾಧಿಕಾರವು ನಡೆಸುವ ತರಬೇತಿ ಶಿಬಿರ ಮತ್ತು ಅದರನ್ವಯ ನಡೆಸುವ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಭಾಗವಸಬೇಕು. ಮಾ.೨೪ರ ಸಂಜೆ ೫ ಗಂಟೆಯೊಳಗೆ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸದಸ್ಯರು, ಅರೆಕಾಲಿಕ ಕಾನೂನು ಸ್ವಯಂ ಸೇವಕ ನೇಮಕಾತಿ ಸಮಿತಿ, ನೆಲ ಮಹಡಿ, ನ್ಯಾಯಲಯಗಳ ಸಂಕೀರ್ಣ, ಮಂಗಳೂರು, ದ.ಕ. ಈ ವಿಳಾಸಕ್ಕೆ ಸಲ್ಲಿಸಬೇಕು.
ಅರ್ಜಿ ನಮೂನೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನೆಲ ಮಹಡಿ, ನ್ಯಾಯಲಯಗಳ ಸಂಕೀರ್ಣ, ಮಂಗಳೂರು ಇವರ ಕಚೇರಿಯಿಂದ ಖುದ್ದಾಗಿ (ರಜೆ ದಿನಗಳನ್ನು ಹೊರತುಪಡಿಸಿ) ಬೆಳಗ್ಗೆ ೧೦:೩೦ರಿಂದ ಸಂಜೆ ೫ರೊಳಗೆ ಪಡೆದುಕೊಳ್ಳಬಹುದಾಗಿದೆ. ಆಧಾರ್ ಕಾರ್ಡ್‌ನ ಗುರುತಿನ ಚೀಟಿಯ ಪ್ರತಿ ಲಗತ್ತಿಸುವುದು ಕಡ್ಡಾಯವಾಗಿದೆ.
ಅರ್ಜಿದಾರರ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣದಾಖಲಾಗಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರೆಕಾಲಿಕ ಕಾನೂನು ಸ್ವಯಂ ಸೇವಕ ಆಯ್ಕೆ ಪ್ರಕ್ರಿಯೆಯು ನೇಮಕಾತಿ ಸಮಿತಿಯ ತೀರ್ಮಾನಕ್ಕೆ ಒಳಪಟ್ಟಿರುತ್ತದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು (ದೂ.ಸಂ:0824-2448111) ಅಥವಾ ಇಮೇಲ್ dlsa.mangaluru@gmail.comನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.







