ಪೌರ ಕಾರ್ಮಿಕರ ಖಾಯಮಾತಿಗೆ ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ. 14: ‘ಪೌರಕಾರ್ಮಿಕರನ್ನು ಖಾಯಂಗೊಳಿಸುವ ಸಂಬಂಧ ಎಲ್ಲ ಇಲಾಖೆಗಳಿಂದ ಮಾಹಿತಿ ಪಡೆದು ಆರ್ಥಿಕ ಹೊರೆಯ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಗೆ ಭರವಸೆ ನೀಡಿದ್ದಾರೆ.
ಸೋಮವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ‘ಪೌರಕಾರ್ಮಿಕರನ್ನು ಗುತ್ತಿಗೆದಾರರು ನೇಮಕ ಮಾಡಿಕೊಂಡಿದ್ದು, ಅವರಿಗೆ ಸರಿಯಾಗಿ ವೇತನ ಪಾವತಿಸುತ್ತಿರಲಿಲ್ಲ. ಹೀಗಾಗಿ ಇದೀಗ ಪೌರಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವೇತನ ಜಮೆ ಮಾಡಲಾಗುತ್ತಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಿದೆ' ಎಂದರು.
‘ಅಲ್ಲದೆ, ನಮ್ಮ ಸರಕಾರ ಪ್ರಸಕ್ತ ಆಯವ್ಯಯದಲ್ಲಿ ಪೌರಕಾರ್ಮಿಕರ ಆರೋಗ್ಯಕ್ಕಾಗಿ ಪ್ರತಿತಿಂಗಳು 2 ಸಾವಿರ ರೂ. ಸಂಕಷ್ಟ ಭತ್ಯೆ ಒದಗಿಸಲು ಘೋಷಿಸಲಾಗಿದೆ. ಈ ಸೌಲಭ್ಯ ಖಾಯಂ ಹಾಗೂ ಗುತ್ತಿಗೆ ಪೌರ ಕಾರ್ಮಿಕರಿಗೆ ಅನ್ವಯಿಸಲಾಗುವುದು. ವೈದ್ಯಕೀಯ ಸೌಲಭ್ಯ ಒದಗಿಸುವುದು ಸೇರಿದಂತೆ ಅವರಿಗೆ ಅಗತ್ಯ ಅನುಕೂಲಗಳನ್ನು ಮಾಡಿಕೊಡುವ ಕಡೆ ಸರಕಾರ ಆದ್ಯತೆ ನೀಡಲಿದೆ' ಎಂದು ಅವರು ತಿಳಿಸಿದರು.
‘ರಾಜ್ಯದಲ್ಲಿನ ಪೌರಕಾರ್ಮಿಕರ ಪರಿಸ್ಥಿತಿಯ ಅರಿವಿದೆ. ನೈರ್ಮಲ್ಯ ಕಾಪಾಡುವ ಸಂದರ್ಭದಲ್ಲಿ ಹಲವು ಮಂದಿ ತಮ್ಮ ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿವೆ. ಅವು ಮತ್ತೆ ಮತ್ತೆ ಮರುಕಳಿಸುತ್ತಿವೆ. ಹೀಗಾಗಿಎಲ್ಲ ಇಲಾಖೆಗಳಿಂದ ಮಾಹಿತಿ ಪಡೆದು ಖಾಯಂ ಮಾಡುವ ಕುರಿತು ನಿರ್ಧಾರ ಮಾಡಲಾಗುವುದು' ಎಂದು ಅವರು ಪುನರುಚ್ಚರಿಸಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಪೌರಕಾರ್ಮಿಕರ ಸೇವೆ ಖಾಯಂ ಮಾಡುವುದು ಸೇರಿದಂತೆ 27 ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಅವರು ಪ್ರತಿಭಟನೆ ನಡೆಸಿದ್ದಾರೆ. ಮಹಾನಗರ ಪಾಲಿಕೆ, ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ, ನಗರಗಳಲ್ಲಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಮೃತಪಟ್ಟವರಿಗೆ 10 ಲಕ್ಷ ರೂ.ಪರಿಹಾರ ನೀಡುತ್ತಿಲ್ಲ. ನಮ್ಮ ಅವಧಿಯಲ್ಲಿ ಅವರ ವೇತನವನ್ನು 7,700 ರೂ.ಗಳಿಂದ 17 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಪೌರಕಾರ್ಮಿಕರನ್ನು ಖಾಯಂ ಮಾಡಬೇಕು' ಎಂದು ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಪಿ.ರಾಜೀವ್, ‘ಪೌರಕಾರ್ಮಿಕರಿಗೆ 2 ಸಾವಿರ ರೂ.ಸಂಕಷ್ಟ ಭತ್ತೆ ಸಾಲುವುದಿಲ್ಲ. ನಗರ, ಪಟ್ಟಣದ ಸ್ವಚ್ಛತೆಗೆ ಪೌರಕಾರ್ಮಿಕರ ಸೇವೆ ಬಹಳ ಮುಖ್ಯ. ಪ್ರಧಾನಿ ಮೋದಿಯವರು ಪೌರಕಾರ್ಮಿಕರ ಪಾದ ತಳೆದು ಸನ್ಮಾನಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಗೆ ಪೌರ ಕಾರ್ಮಿಕರೊಬ್ಬರನ್ನು ಆಯ್ಕೆ ಮಾಡಲು 60 ವರ್ಷ ಮೇಲ್ಪಟ್ಟ ವ್ಯಕ್ತಿ ಸಿಗುವುದೇ ಕಷ್ಟವಾಯಿತು. ಅವರ ಜೀವಿತಾವಧಿ 45ರಿಂದ 50ವರ್ಷ ಅಷ್ಟೇ' ಎಂದು ಬೇಸರ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರು ನಗರಾಭಿವೃದ್ಧಿ, ಪೌರಾಡಳಿತ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಶೇ.1ರಷ್ಟು ಸೆಸ್ ಸಂಗ್ರಹಿಸಲಾಗುತ್ತಿದೆ. ಆ ಮೊತ್ತವನ್ನು ಪೂರ್ಣ ಪ್ರಮಾಣದಲ್ಲಿ ಪೌರ ಕಾರ್ಮಿಕರ ವೇತನಕ್ಕೆ ಬಳಕೆ ಮಾಡಬೇಕು. ಅವರು ಸ್ವಚ್ಛತೆ ಕಾರ್ಯ ಮಾಡದಿದ್ದರೆ ನಗರ ಮತ್ತು ಪಟ್ಟಣ ಪ್ರದೇಶಗಳ ಸ್ಥಿತಿಯನ್ನು ಊಹೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರಿಗೆ ಸೂಕ್ತ ವೇತನ ಹಾಗೂ ಕೆಲಸ ಖಾಯಂಗೊಳಿಸಬೇಕು' ಎಂದು ರಾಜೀವ್ ಆಗ್ರಹಿಸಿದರು.







