ಆನ್‌ಲೈನ್ ವಂಚನೆಯ ವಿರುದ್ಧ ದೂರು
ಮಂಗಳೂರು : ಆ್ಯಕ್ಸಿಸ್ ಬ್ಯಾಂಕ್‌ನವರು ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ನಗರದ ವ್ಯಕ್ತಿಯಿಂದ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಪಡೆದು 1.80 ಲ.ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಮಾ.14ರಂದು ನಗರದ ವ್ಯಕ್ತಿಯೋರ್ವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯು ತಾನು ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನವನೆಂದು ನಂಬಿಸಿ ರಿವಾರ್ಡ್ಸ್ ಪಾಯಿಂಟ್ಸ್ ಬಂದಿರುವುದಾಗಿ ಹೇಳಿದ್ದಾನೆ. ಅಲ್ಲದೆ ಅದನ್ನು ನೋಡಲು ಒಟಿಪಿ ನೀಡಬೇಕೆಂದು ಸೂಚಿಸಿದ್ದಾನೆ. ಆತನ ಮಾತನ್ನು ನಂಬಿದ ವ್ಯಕ್ತಿಯು ಒಟಿಪಿ ನೀಡಿದ್ದು, ಆ ಬಳಿಕ ರಿವಾರ್ಡ್ಸ್ ಪಾಯಿಂಟ್ ಆ್ಯಕ್ಟಿವೇಷನ್ ಮಾಡಲು ಮತ್ತೊಮ್ಮೆ ಒಟಿಪಿ ನೀಡುವಂತೆ ಅಪರಿಚಿತ ವ್ಯಕ್ತಿ ತಿಳಿಸಿದ್ದಾನೆ. ಅದರಂತೆ ನಗರದ ವ್ಯಕ್ತಿಯು ಮತ್ತೊಮ್ಮೆ ಒಟಿಪಿ ನೀಡಿದ್ದಾರೆ.
ಆ ಬಳಿಕ ನಗರದ ವ್ಯಕ್ತಿಯ ಮೊಬೈಲ್‌ಗೆ ಮತ್ತೋರ್ವ ಅಪರಿಚಿತ ವ್ಯಕ್ತಿ ಕರೆ ಮಾಡಿ ಬ್ಯಾಂಕ್‌ನ ಡೆಬಿಟ್ ಕಾರ್ಡ್‌ನ ಮಿತಿ ಹೆಚ್ಚು ಮಾಡಲು ಡೆಬಿಟ್ ಕಾರ್ಡ್‌ನ ನಂಬರ್ ಮತ್ತು ಅದರ ಸಿವಿವಿ ನಂಬರ್ ನೀಡುವಂತೆ ಹೇಳಿದ್ದಾನೆ. ಆ ನಂಬರ್‌ಗಳನ್ನು ಕೂಡ ನೀಡಿದೊಡನೆ ನಗರದ ವ್ಯಕ್ತಿಯ ಖಾತೆಯಿಂದ 1.80 ಲ.ರೂ. ವರ್ಗಾವಣೆಯಾಗಿರುವ ಸಂದೇಶ ಬಂದಿದೆ.
ಈ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





