ಸಂತೋಷ್ ಶೆಟ್ಟಿ ಅಸೈಗೋಳಿ ಬೆಂಬಲಿಗರ ಜತೆ ಬಿಜೆಪಿ ಸೇರಿದ್ದಾರೆ: ಚಂದ್ರಹಾಸ್ ಪಂಡಿತ್ ಹೌಸ್
ಉಳ್ಳಾಲ: ಪಂಚ ರಾಜ್ಯಗಳಲ್ಲಿ ನಾಲ್ಕು ರಾಜ್ಯಗಳ ಫಲಿತಾಂಶ ಬಿಜೆಪಿ ಜಯಗಳಿಸಲು ಬಿಜೆಪಿಯ ಸಂಘಟನಾತ್ಮಕ ಕಾರ್ಯ ಚಟುವಟಿಕೆ ಕಾರಣ ವಾಗಿದೆ. ಈ ಹಿನ್ನೆಲೆಯಿಂದ ಬದಲಾವಣೆಯ ಗಾಳಿ ಬೀಸಿದ್ದು, ಕಾಂಗ್ರೆಸ್ ನ ಕೆಲವು ನಾಯಕರು ಬಿಜೆಪಿ ಕಡೆ ಮುಖಮಾಡಿದ್ದಾರೆ ಎಂದು ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು.
ಅವರು ಕುತ್ತಾರ್ ನಲ್ಲಿ ಬಿಜೆಪಿ ಮಂಗಳೂರು ಮಂಡಲ ವತಿಯಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರಸಕ್ತ ಮಂಡಲ, ಬೂತ್ ಮಟ್ಟದಲ್ಲಿ ಬಿಜೆಪಿ ಬೆಳೆಯುತ್ತಿದೆ. ಕಾಂಗ್ರೆಸ್ ನ ಬ್ಲಾಕ್ ಅಧ್ಯಕ್ಷರಾಗಿದ್ದ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ 78 ಮಂದಿ ಬೆಂಬಲಿಗರ ಜತೆ ಬಿಜೆಪಿ ಸೇರಿದ್ದಾರೆ. ಅವರನ್ನು ಸ್ವಾಗತಿಸಿ ಸೇರ್ಪಡೆ ಮಾಡಲಾಗಿದೆ. ಕಾಂಗ್ರೆಸ್ ನಲ್ಲಿರುವ ಹಲವು ಕಾರ್ಯಕರ್ತರು ಬಿಜೆಪಿ ಜತೆ ಸಂಪರ್ಕದಲ್ಲಿದ್ದಾರೆ ಎಂದರು.
ಶಾಸಕ ಖಾದರ್ ರವರ ವೈಫಲ್ಯ ಜನರಿಗೆ ಅರ್ಥವಾಗಿದೆ. ಈ ಕಾರಣದಿಂದ ಬದಲಾವಣೆ ಗಾಳಿ ಬೀಸುತ್ತಿದೆ. ಅವರು15 ವರ್ಷ ಗಳ ಕಾಲ ಶಾಸಕರಾಗಿ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಸಚಿವರಾಗಿದ್ದಾಗ ಅಗ್ನಿ ಶಾಮಕ ದಳದ ವ್ಯವಸ್ಥೆ ಮಾಡಲಿಲ್ಲ ಎಂದು ಆರೋಪಿಸಿದರು.
ಮೈಸೂರು ಇಲೆಕ್ಟ್ರಿಕಲ್ ಪ್ರೈವೇಟ್ ಲಿಮಿಟೆಡ್ ನಿಗಮದ ಅಧ್ಯಕ್ಷ ಸಂತೋಷ್ ಬೋಳಿಯಾರ್ ಮಾತನಾಡಿ, ಈಗಾಗಲೇ 75 ಕಾರ್ಯಕರ್ತರು ಸಂತೋಷ್ ಶೆಟ್ಟಿ ಅಸೈಗೋಳಿ ಜೊತೆ ಬಿಜೆಪಿ ಸೇರ್ಪಡೆ ಗೊಂಡರು. ಕೆಲವೇ ದಿನಗಳಲ್ಲಿ 1000 ಕಾಂಗ್ರೆಸ್ ಕಾರ್ಯಕರ್ತರು ಅಸೈಗೋಳಿ ಮೈದಾನದಲ್ಲಿ ಬಿಜೆಪಿ ಸೇರುವ ನಿರೀಕ್ಷೆ ಇದೆ. 2023ರ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಗೆ ನೇರ ಸ್ಪರ್ಧೆ ಇಲ್ಲ. ಬಿಜೆಪಿ ಎಸ್ಡಿಪಿಐ ನಡುವೆ ಸ್ಪರ್ಧೆ ನಡೆಯಲಿದೆ. ಉಳ್ಳಾಲದಲ್ಲಿ ಬಹಳಷ್ಟು ಮಂದಿ ಎಸ್ಡಿಪಿಐಯಲ್ಲಿ ಇದ್ದಾರೆ. ತಾ.ಪಂ., ಜಿ.ಪಂ., ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಬಿಜೆಪಿಗೆ ಪೈಪೋಟಿ ಇಲ್ಲ ಎಂದರು.
ಮಂಗಳೂರು ಮಂಡಲ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಹೇಮಂತ್ ಶೆಟ್ಟಿ, ನವೀನ್ ಪಾದಲ್ಪಾಡಿ ಉಪಸ್ಥಿತರಿದ್ದರು.