VIDEO- ಆತುರದ ನಿರ್ಧಾರ ಕೈಗೊಳ್ಳಬೇಡ: ವಿಧಾನಸೌಧದಲ್ಲಿ ಸಿ.ಎಂ ಇಬ್ರಾಹಿಂ- ಸಿದ್ದರಾಮಯ್ಯ ಮಾತುಕತೆ

ಬೆಂಗಳೂರು, ಮಾ. 14: ‘ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಮೇಲ್ಮನೆ ಸದಸ್ಯ ಸಿ.ಎಂ. ಇಬ್ರಾಹೀಂ ಅವರಿಗೆ, ‘ಯಾವುದೇ ಆತುರದ ತೀರ್ಮಾನ ಕೈಗೊಳ್ಳಬೇಡ. ಮಾತನಾಡೋಣ ಬಾ, ಬೇರೆ ಆಲೋಚನೆ ಮಾಡಬೇಡ' ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.
ಸೋಮವಾರ ವಿಧಾನಸಭೆ ಮೊಗಸಾಲೆಯಲ್ಲಿ ಇದ್ದಕ್ಕಿದ್ದಂತೆ ಮುಖಾಮುಖಿಯಾದ ಇಬ್ರಾಹೀಂ ಅವರಿಗೆ, ‘ಸುಮ್ಮನೆ ಇರು, ಆತುರ ಬಿದ್ದು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡ, ಬೇರೆ ಯೋಚನೆ ಮಾಡಬೇಡ' ಎಂದು `ಯಾವುದೇ ಕಾರಣಕ್ಕೂ ಪಕ್ಷ ತ್ಯಜಿಸುವ ತೀರ್ಮಾನ ಮಾಡಬೇಡ' ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಸಲಹೆ ನೀಡಿದರು.
‘ಮಾ.31ಕ್ಕೆ ನಿಮ್ಮ ಮನೆಗೆ ಬರುವುದಾಗಿ ಈಗಾಗಲೇ ಹೇಳುತ್ತಿದ್ದೇನೆ. ಎಲ್ಲವನ್ನು ಚರ್ಚೆ ಮಾಡೋಣ, ಸದ್ಯಕ್ಕೆ ಸುಮ್ಮನಿರು, ಬಾಷಾ ಕೈಯಲ್ಲಿ ನಾನೇ ಹೇಳಿ ಕಳುಹಿಸಿದ್ದೇನೆ. ಸುಮ್ಮನೆ ನೀನು ಏನೇನೋ ಮಾಡಲಿಕ್ಕೆ ಹೋಗಬೇಡ' ಎಂದು ಸಿದ್ದರಾಮಯ್ಯ, ಇಬ್ರಾಹೀಂ ಅವರಿಗೆ ತಿಳಿಸಿದರು. ಇಬ್ರಾಹೀಂ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿಯವರಿಗೆ ತಮ್ಮ ರಾಜೀನಾಮೆ ಪತ್ರ ರವಾನಿಸಿದ್ದು, ಜೆಡಿಎಸ್ ಸೇರ್ಪಡೆಯಾಗಲಿದ್ದೇನೆ ಎಂದು ಪ್ರಕಟಿಸಿದ್ದರು. ಇದೀಗ ಸಿದ್ದರಾಮಯ್ಯ, ಇಬ್ರಾಹೀಂ ಮನವೊಲಿಕೆ ಪ್ರಯತ್ನಕ್ಕೆ ಮುಂದಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.







