ದೇವಸ್ಥಾನಗಳನ್ನು ಖಾಸಗಿಯವರಿಗೆ ಹಸ್ತಾಂತರ ಪ್ರಸ್ತಾವನೆ ಇಲ್ಲ: ಸಚಿವ ಆರ್.ಅಶೋಕ್

ಬೆಂಗಳೂರು, ಮಾ. 14: ‘ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳನ್ನು ಖಾಸಗಿಯವರಿಗೆ ಹಸ್ತಾಂತರ ಮಾಡುವ ಪ್ರಸ್ತಾವನೆ ರಾಜ್ಯ ಸರಕಾರದ ಮುಂದಿಲ್ಲ' ಎಂದು ಮುಜರಾಯಿ ಸಚಿವರ ಪರವಾಗಿ ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಬಸವನಗೌಡ ದದ್ದಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರ್.ಅಶೋಕ್, ‘ಮುಜರಾಯಿ ಇಲಾಖೆಯ ದೇವಸ್ಥಾನಗಳನ್ನು ಖಾಸಗಿಯವರಿಗೆ ಹಸ್ತಾಂತರ ಮಾಡುವ ಪ್ರಸ್ತಾವನೆ ಸರಕಾರದ ಮುಂದಿಲ್ಲ. ಅಲ್ಲದೆ ಟ್ರಸ್ಟ್‍ಗಳನ್ನು ರಚನೆ ಮಾಡಲಾಗುತ್ತದೆ ಎಂಬುದು ಕೇವಲ ವದಂತಿ' ಎಂದು ಸ್ಪಷ್ಟಪಡಿಸಿದರು.
‘ಮುಜರಾಯಿ ಇಲಾಖೆಯ ‘ಎ' ಮತ್ತು ‘ಬಿ' ದರ್ಜೆಯ ದೇವಸ್ಥಾನಗಳಿಗೆ ಸಾಕಷ್ಟು ಆದಾಯ ಬರುತ್ತದೆ. ಅಲ್ಲಿ ಬರುವ ಆದಾಯವನ್ನು ದೇವಸ್ಥಾನಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದೆ. ಮುಜರಾಯಿ ದೇವಸ್ಥಾನಗಳಿಗೆ ಬರುವ ಆದಾಯಕ್ಕೆ ಅನುಗುಣವಾಗಿ ನಾವು ಕ್ಷೇತ್ರವಾರು ಅನುದಾನ ಬಿಡುಗಡೆ ಮಾಡುವುದು ಎಂದು ಅವರು ಹೇಳಿದರು.
‘ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 115 ದೇವಸ್ಥಾನಗಳಿವೆ. ಈ ದೇವಾಲಯಗಳಿಗೆ ಅನುದಾನದ ಅಗತ್ಯವಿದ್ದರೆ ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು. ಅನುದಾನ ವಿತರಣೆಯಲ್ಲಿ ಸರಕಾರ ಯಾವುದೇ ರೀತಿಯಲ್ಲಿಯೂ ತಾರಮತ್ಯವನ್ನು ಮಾಡುವುದಿಲ್ಲ ಎಂದು ಅವರು ವಿವರಣೆ ನೀಡಿದರು.







