ಮಥುರಾದ ಶಾಹಿ ಈದ್ಗಾ ಮಸೀದಿಯ ಹಸ್ತಾಂತರ ಕುರಿತು ಅರ್ಜಿಗೆ ಮರುಜೀವ ನೀಡಿದ ಅಲಹಾಬಾದ್ ಹೈಕೋರ್ಟ್

Photo: PTI
ಹೊಸದಿಲ್ಲಿ,ಮಾ.14: ಉತ್ತರ ಪ್ರದೇಶದ ಮಥುರಾ ನಗರದಲ್ಲಿ ಶ್ರೀಕೃಷ್ಣ ದೇವಸ್ಥಾನ ಸಂಕೀರ್ಣಕ್ಕೆ ಹೊಂದಿಕೊಂಡಿರುವ ಶಾಹಿ ಈದ್ಗಾ ಮಸೀದಿಯನ್ನು ಹಿಂದುಗಳು ನಡೆಸುತ್ತಿರುವ ಟ್ರಸ್ಟ್ವೊಂದಕ್ಕೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ಮರು ಸ್ಥಾಪಿಸಿದೆ.
ಕಳೆದ ವರ್ಷದ ಜ.19ರಂದು ಅರ್ಜಿದಾರರು ಜೊತೆಯಲ್ಲಿ ವಕೀಲರಿಲ್ಲದೆ ನ್ಯಾಯಾಲಯದಲ್ಲಿ ಹಾಜರಾಗಿದ್ದರಿಂದ ಅರ್ಜಿಯನ್ನು ವಜಾಗೊಳಿಸಲಾಗಿತ್ತು.
1669ರಲ್ಲಿ ಮುಘಲ್ ಚಕ್ರವರ್ತಿ ಔರಂಗಝೇಬ್ ಕೃಷ್ಣ ದೇವಸ್ಥಾನವೊಂದನ್ನು ನೆಲಸಮಗೊಳಿಸಿ ಮಸೀದಿಯನ್ನು ನಿರ್ಮಿಸಿದ್ದು,ಮಸೀದಿಯ ಗೋಡೆಗಳಲ್ಲಿ ಈಗಲೂ ಹಿಂದು ಧಾರ್ಮಿಕ ಚಿಹ್ನೆಗಳಿವೆ ಎಂದು ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿಯು ಅರ್ಜಿಯಲ್ಲಿ ಪ್ರತಿಪಾದಿಸಿದೆ.
ಅರ್ಜಿಯಲ್ಲಿ ಶ್ರೀಕೃಷ್ಣ ಜನ್ಮಸ್ಥಾನದ ಗುರುತಾಗಿ ದೇವಸ್ಥಾನವನ್ನು ನಿರ್ಮಿಸಲು ರಚಿಸಲಾಗಿರುವ ಟ್ರಸ್ಟ್ನಡಿ ಹಿಂದುಗಳಿಗೆ ಭೂಮಿಯು ಹಸ್ತಾಂತರವಾಗುವಂತೆ ನ್ಯಾಯಾಲಯದಿಂದ ನಿರ್ದೇಶಗಳನ್ನು ಕೋರಲಾಗಿದೆ.
ಅಲಹಾಬಾದ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಾಜೇಶ ಬಿಂದಾಲ್ ಮತ್ತು ನ್ಯಾ.ಪ್ರಕಾಶ ಪಾಡಿಯಾ ಅವರ ಪೀಠವು ಮೂಲ ಅರ್ಜಿಯನ್ನು ಈಗ ಮರುಸ್ಥಾಪಿಸಿದ್ದು,ಜು.25ರಂದು ಮುಂದಿನ ವಿಚಾರಣೆ ನಡೆಯಲಿದೆ.
1991ರ ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆಯು ಅಯೋಧ್ಯೆಯ ವಿವಾದಿತ ನಿವೇಶನವನ್ನು ಹೊರತುಪಡಿಸಿ ಎಲ್ಲ ಧಾರ್ಮಿಕ ರಚನೆಗಳನ್ನು ಅವು ದೇಶಕ್ಕೆ ಸ್ವಾತಂತ್ರ ಲಭಿಸಿದ್ದ ಸಮಯದಲ್ಲಿ ಇದ್ದ ರೀತಿಯಲ್ಲಿ ರಕ್ಷಿಸುತ್ತದೆ. ಹೀಗಾಗಿ ಮಸೀದಿಯ ಜಾಗದಲ್ಲಿ ದೇವಸ್ಥಾನವನ್ನು ಅಥವಾ ದೇವಸ್ಥಾನದ ಜಾಗದಲ್ಲಿ ಮಸೀದಿಯನ್ನು ನಿರ್ಮಿಸುವಂತಿಲ್ಲ. ಆದಾಗ್ಯೂ ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿಯು ಅರ್ಜಿಯನ್ನು ಸಲ್ಲಿಸಿದೆ.







