ನಿಷೇಧಾಜ್ಞೆ ಹಿನ್ನೆಲೆ; ʼಸುರತ್ಕಲ್ ಟೋಲ್ ಚಲೋʼ ಪಾದಯಾತ್ರೆ ಮುಂದೂಡಿಕೆ: ಮುನೀರ್ ಕಾಟಿಪಳ್ಳ
ಮಂಗಳೂರು: ಮಾರ್ಚ್ 15ರಂದು ಹಿಜಾಬ್ ಕುರಿತು ಉಚ್ಚ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಮಧ್ಯರಾತ್ರಿಯಿಂದ ನಿಷೇಧಾಜ಼್ಞೆ ಜಾರಿಗೊಳಿಸಲಾಗಿದೆ. ಆ ಹಿನ್ನೆಲೆಯಲ್ಲಿ ʼಸುರತ್ಕಲ್ ಟೋಲ್ ಚಲೋʼ ಪಾದಯಾತ್ರೆ ಮುಂದೂಡಲಾಗಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಎಲ್ಲಾ ರೀತಿಯ ಸಭೆ ಸಮಾರಂಭ, ಮೆರವಣಿಗೆಗಳ ಮೇಲೆ ನಿಷೇದ ಹೇರಲಾಗಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಸುರತ್ಕಲ್ ಟೋಲ್ ಚಲೋ ಪಾದಯಾತ್ರೆ ನಡೆಸುವುದು ಅಸಾಧ್ಯವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರಲಿರುವ ಜನರ ಹಿತ, ಸುರಕ್ಷೆ, ಕಾನೂನಿನ ಅಂಶಗಳನ್ನು ಗಮನದಲ್ಲಿಟ್ಟು ಸುರತ್ಕಲ್ ನಲ್ಲಿ ತುರ್ತಾಗಿ ಸಭೆ ಸೇರಿದ ಲಭ್ಯ ಮುಖಂಡರ ಸಭೆ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿದೆ.
ಮಾ.15ರ ಬೆಳಗ್ಗೆ ಹೆಜಮಾಡಿಯಲ್ಲಿ ಸಮಾನ ಮನಸ್ಕ ಸಂಘಟನೆಗಳ ಪದಾಧಿಕಾರಿಗಳ ಸಭೆ ಸೇರಿ ಮುಂದಿನ ದಿನಾಂಕ ಪ್ರಕಟಿಸಲಾಗುವುದು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕರಾದ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





