ಶಸ್ತ್ರಾಸ್ತ್ರ ಒದಗಿಸುವಂತೆ ಚೀನಾಕ್ಕೆ ರಶ್ಯ ಕೋರಿಕೆ: ಅಮೆರಿಕ ಮಾಧ್ಯಮ ವರದಿ

ಹೊಸದಿಲ್ಲಿ, ಮಾ.14: ಉಕ್ರೇನ್ ವಿರುದ್ಧದ ಯುದ್ಧಕ್ಕೆ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವು ಒದಗಿಸುವಂತೆ ರಶ್ಯವು ಚೀನಾವನ್ನು ಕೋರಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಆದರೆ ಈ ವರದಿಯನ್ನು ನಿರಾಕರಿಸಿರುವ ಚೀನಾ, ಉಕ್ರೇನ್ ಯುದ್ಧದಲ್ಲಿ ತನ್ನ ಪಾತ್ರದ ಬಗ್ಗೆ ಅಮೆರಿಕದ ಮಾಧ್ಯಮಗಳು ತಪ್ಪು ಮಾಹಿತಿ ಪ್ರಸಾರಿಸುತ್ತಿವೆ ಎಂದು ಆರೋಪಿಸಿದೆ. ಉಕ್ರೇನ್ ಮೇಲಿನ ರಶ್ಯ ಆಕ್ರಮಣಕ್ಕೆ ಸಂಬಂಧಿಸಿ ಸೋಮವಾರದ ಕೆಲವು ಮಹತ್ವದ ಬೆಳವಣಿಗೆಗಳು ಹೀಗಿವೆ:
ಉಕ್ರೇನ್ ವಿರುದ್ಧದ ಆಕ್ರಮಣ ಆರಂಭವಾದ ದಿನವೇ ರಶ್ಯವು ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವು ಒದಗಿಸುವಂತೆ ಚೀನಾಕ್ಕೆ ಕೋರಿಕೆ ಸಲ್ಲಿಸಿತ್ತು ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಉಕ್ರೇನ್ ಬಿಕ್ಕಟ್ಟಿನಲ್ಲಿ ಚೀನಾವನ್ನು ಗುರಿಯಾಗಿಸಿ ಅಮೆರಿಕ ದುರುದ್ದೇಶಪೂರಿತವಾಗಿ ತಪ್ಪುಮಾಹಿತಿ ಪ್ರಸಾರಿಸುತ್ತಿದೆ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರರು ಹೇಳಿದ್ದಾರೆ.
ಉಕ್ರೇನ್‌ನಲ್ಲಿನ ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ ರಾಜತಾಂತ್ರಿಕ ಪ್ರಯತ್ನ ಮುಂದುವರಿಕೆ. ಮತ್ತೊಂದು ಸುತ್ತಿನ ಮಾತುಕತೆಗೆ ರಶ್ಯ- ಉಕ್ರೇನ್ ದೇಶಗಳ ಸಮ್ಮತಿ.
ಪಶ್ಚಿಮ ಪ್ರಾಂತದ ವಿಮಾನ ನಿಲ್ದಾಣ, ಈಶಾನ್ಯದ ಚೆರ್ನಿಹಿವ್ ನಗರ ಮತ್ತು ದಕ್ಷಿಣದ ಮಿಕೊಲಾಯಿವ್ ನಗರದ ಮೇಲೆ ರಶ್ಯದ ವಾಯುದಾಳಿ ಮುಂದುವರಿದಿದೆ ಎಂದು ಉಕ್ರೇನ್ ಸರಕಾರದ ಹೇಳಿಕೆ. ಫೆಬ್ರವರಿ 24ರಿಂದ (ರಶ್ಯ ಆಕ್ರಮಣ ಆರಂಭವಾದಂದಿನಿಂದ) ಕಪ್ಪು ಸಮುದ್ರದ ತೀರದಲ್ಲಿರುವ ಬಂದರು ನಗರ ಮರಿಯುಪೋಲ್‌ನಲ್ಲಿ 2,500ಕ್ಕೂ ಅಧಿಕ ನಾಗರಿಕರು ಮೃತಪಟ್ಟಿರುವುದಾಗಿ ಉಕ್ರೇನ್ ಅಧ್ಯಕ್ಷರ ಸಲಹೆಗಾರ ಒಲೆಕ್ಸಿ ಅರೆಸ್ಟೊವಿಚ್ ಹೇಳಿದ್ದಾರೆ.
ಮಾರ್ಚ್ 12ರರೆಗೆ ಸುಮಾರು 2.7 ಮಿಲಿಯನ್ ಜನ ಉಕ್ರೇನ್‌ನಿಂದ ಪಲಾಯನ ಮಾಡಿರುವುದಾಗಿ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಸಮಿತಿ ಯುಎನ್‌ಎಚ್‌ಸಿಆರ್ ವರದಿ ಮಾಡಿದ್ದು, ಇವರಲ್ಲಿ ಸುಮಾರು 1.7 ಮಿಲಿಯನ್ ಜನರು ಪೋಲ್ಯಾಂಡ್‌ನತ್ತ ತೆರಳಿದ್ದಾರೆ ಎಂದು ಹೇಳಿದೆ.
ಉಕ್ರೇನ್ ವಾಯುಕ್ಷೇತ್ರವನ್ನು ವಿಮಾನ ಸಂಚಾರ ನಿಷೇಧ ವಲಯವನ್ನಾಗಿ ಘೋಷಿಸಬೇಕೆಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಮತ್ತೊಮ್ಮೆ ನೇಟೊ ದೇಶಗಳನ್ನು ಆಗ್ರಹಿಸಿದ್ದಾರೆ. ಪೋಲ್ಯಾಂಡ್ ಗಡಿಭಾಗದಲ್ಲಿರುವ ತನ್ನ ಸೇನಾ ನೆಲೆಯನ್ನು ಗುರಿಯಾಗಿಸಿ ರಶ್ಯ ನಡೆಸಿರುವ ವಾಯುದಾಳಿ, ನೇಟೊ ಸದಸ್ಯ ದೇಶಗಳಿಗೆ ರವಾನಿಸಿರುವ ಎಚ್ಚರಿಕೆಯ ಸಂದೇಶವಾಗಿದೆ ಎಂದವರು ವಿಶ್ಲೇಷಿಸಿದ್ದಾರೆ.







