ಹಿಜಾಬ್ ತೀರ್ಪು ಹಿನ್ನೆಲೆ: ಕಲಬುರಗಿ ಜಿಲ್ಲಾದ್ಯಂತ ಮಾ.19ರ ವರೆಗೆ ನಿಷೇಧಾಜ್ಞೆ, ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ

ಕಲಬುರಗಿ: ಹಿಜಾಬ್ ಪ್ರಕರಣದ ಕುರಿತಂತೆ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯವು ಮಂಗಳವಾರ ಬೆಳಿಗ್ಗೆ ತನ್ನ ತೀರ್ಪು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಾ.14ರ ರಾತ್ರಿ 8 ರಿಂದ ಮಾ.19ರ ಬೆಳಿಗ್ಗೆ 6 ಗಂಟೆ ವರೆಗೆ ಸಿ.ಆರ್.ಪಿ.ಸಿ. ಕಾಯ್ದೆ-1973 ಕಲಂ 144ರನ್ವಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ, ಮಂಗಳವಾರ ಒಂದು ದಿನ ಮಾತ್ರ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ರಜೆ ಘೋಷಿಸಿದ್ದಾರೆ.
ಸೋಮವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಮಂಗಳವಾರ ಶಾಲಾ-ಕಾಲೇಜುಗಳಲ್ಲಿ ಪರೀಕ್ಷೆ ನಿಗದಿಯಾಗಿದಲ್ಲಿ, ಅದಕ್ಕೆ ರಜೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೆರವಣಿಗೆ-ಪ್ರತಿಭಟನೆ ನಿಷೇಧ: ನ್ಯಾಯಾಲಯದ ತೀರ್ಪನ್ನು ಎಲ್ಲರು ಗೌರವಿಸಬೇಕು. ತೀರ್ಪಿನ ಪರ-ವಿರೋಧ ಕುರಿತು ಯಾರು ಮೆರವಣಿಗೆ, ಪ್ರತಿಭಟನೆ, ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ತಪ್ಪು ಸಂದೇಶ ಪ್ರಸಾರ ಮಾಡಿದಲ್ಲಿ ಕಠಿಣ ಕ್ರಮ: ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ನ್ಯಾಯಾಲಯದ ತೀರ್ಪಿನ ಸುದ್ದಿ ಪ್ರಸಾರ ಮಾಡುವಾಗ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಬರುವಂತೆ, ಸಮುದಾಯಗಳ ನಡುವೆ ಪ್ರಚೋದನೆಗೆ ಕಾರಣವಾಗುವ ಯಾವುದೇ ಸುಳ್ಳು ಸುದ್ದಿ ಪ್ರಸಾರ ಮಾಡುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಇದನ್ನು ಉಲ್ಲಂಘಿಸಿ ಪ್ರಸಾರ ಮಾಡುವುದು ಕಂಡುಬಂದಲ್ಲಿ ಅಂತಹ ಸಾಮಾಜಿಕ ಜಾಲತಾಣಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಭದ್ರತೆ: ಜಿಲ್ಲಾ ಪೊಲೀಸ್ ಅಧೀಕ್ಷಕಿ ಇಶಾ ಪಂತ್ ಮಾತನಾಡಿ 144 ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ಇರಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು ಇದ್ದರು.







