ರಷ್ಯಾದಿಂದ ಅಂತರ ಕಾಪಾಡಲು ಭಾರತ, ಚೀನಾಗೆ ಅಮೆರಿಕ ಒತ್ತಡ

ವಾಷಿಂಗ್ಟನ್: ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾದಿಂದ ಅಂತರ ಕಾಪಾಡಿಕೊಳ್ಳುವಂತೆ ಭಾರತ ಮತ್ತು ಚೀನಾಗೆ ಅಮೆರಿಕ ಒತ್ತಾಯಿಸಿದೆ.
ರಷ್ಯಾ ವಿರುದ್ಧ ಹೇರಿರುವ ನಿರ್ಬಂಧಗಳಿಂದಾಗಿ ರಷ್ಯಾದ ಪತನವಾಗದಂತೆ ಭಾರತ ಹಾಗೂ ಚೀನಾ ತಡೆಯುತ್ತಿವೆ ಎಂಬ ಸಂದೇಹ ಅಮೆರಿಕವನ್ನು ಕಾಡುತ್ತಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ಮೇಲೆ ಒತ್ತಡ ತರುವ ತಂತ್ರವನ್ನು ಅಮೆರಿಕ ಅನುಸರಿಸುತ್ತಿದೆ.
ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜ್ಯಾಕ್ ಸುಲಿವನ್ ಅವರು ಚೀನಾದ ಉನ್ನತ ರಾಜತಾಂತ್ರಿಕ ಅಧಿಕಾರಿಯನ್ನು ರೋಮ್‍ನಲ್ಲಿ ರವಿವಾರ ಭೇಟಿ ಮಾಡಿ, ರಷ್ಯಾಗೆ ಮಿಲಿಟರಿ ಮತ್ತು ಹಣಕಾಸು ನೆರವು ನೀಡುವ ಸಂಭವನೀಯತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ರಷ್ಯಾ, ಉಕ್ರೇನ್ ಮೇಲಿನ ಹಿಡಿತ ಬಿಗಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಚೀನಾದಿಂದ ಸೇನಾ ಸಾಮಗ್ರಿಗಳ ಮತ್ತು ಆರ್ಥಿಕ ನೆರವು ಕೋರಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಭೇಟಿ ವಿಶೇಷ ಮಹತ್ವ ಪಡೆದಿದೆ. ಆದರೆ ರಷ್ಯಾ ತನ್ನ ನೆರವು ಕೋರಿದೆ ಎಂಬ ವರದಿಗಳನ್ನು ಚೀನಾ ತಳ್ಳಿಹಾಕಿದೆ.
ರಷ್ಯಾದ ನೆರವಿಗೆ ಬರಬಹುದಾದ ದೇಶಗಳ ಪಟ್ಟಿಯಲ್ಲಿ ಭಾರತದ ಉಲ್ಲೇಖ ಇಲ್ಲವಾದರೂ, ರಷ್ಯಾದಿಂದ ಕಚ್ಚಾ ತೈಲ ಮತ್ತು ಇತರ ವಸ್ತುಗಳನ್ನು ರಿಯಾಯ್ತಿ ದರದಲ್ಲಿ ಪಡೆಯುವ ಸಾಧ್ಯತೆ ಬಗ್ಗೆ ಪರಿಶೀಲಿಸುತ್ತಿದೆ ಹಾಗೂ ರೂಪಾಯಿ- ರೂಬೆಲ್ ವಹಿವಾಟಿನ ಮೂಲಕ ಇದಕ್ಕೆ ಪಾವತಿಸಲು ಸಜ್ಜಾಗಿದೆ ಎನ್ನುವ ವರದಿಗಳು ವಾಷಿಂಗ್ಟನ್‍ನ ಆತಂಕಕ್ಕೆ ಕಾರಣ. ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಹಾಗೂ ಅಮೆರಿಕ- ಭಾರತ ನಡುವಿನ ಸೌಹಾರ್ದ ಸಂಬಂಧದ ನಡುವೆಯೂ ಮಾಸ್ಕೊ-ಬೀಜಿಂಗ್-ನವದೆಹಲಿ ಪಾಲುದಾರಿಕೆ ರೂಪುಗೊಳ್ಳುತ್ತಿದೆ ಎನ್ನುವುದು ಅಮೆರಿಕ ಪರವಾಗಿರುವವರ ವಾದ.
ಒಂದೆಡೆ ರಷ್ಯಾಗೆ ನೆರವು ನೀಡದಂತೆ ಅಮೆರಿಕ ಚೀನಾ ಮೇಲೆ ಒತ್ತಡ ಹಾಕುತ್ತಿದ್ದರೆ, ಇನ್ನೊಂದೆಡೆ, ಇಂಧನಕ್ಕಾಗಿ ಅಮೆರಿಕವನ್ನು ಅವಲಂಬಿಸಿರುವ ನ್ಯಾಟೊ ಸದಸ್ಯ ದೇಶಗಳಿಗೆ ಇದು ಸುಲಭವಾಗಿದೆ. ರಷ್ಯಾ ದಾಳಿಯನ್ನು ಇವು ಖಂಡಿಸಿದ್ದರೂ, ಈ ದೇಶಗಳು ಅನಿವಾರ್ಯವಾಗಿ ರಷ್ಯಾದಿಂದ ಅನಿಲ ಮತ್ತು ತೈಲವನ್ನು ಖರೀದಿಸುತ್ತಿವೆ.
ಭಾರತ ಹಾಗೂ ಚೀನಾ ಎರಡೂ ದೇಶಗಳು ರಷ್ಯಾ ದಾಳಿಯನ್ನು ಖಂಡಿಸಲು ನಿರಾಕರಿಸಿವೆ. ನ್ಯಾಟೊ ವಿಸ್ತರಣೆ ರಷ್ಯಾವನ್ನು ಪ್ರಚೋದಿಸಿವೆ ಎನ್ನುವ ಸಮಾನ ಅಭಿಪ್ರಾಯ ಈ ದೇಶಗಳದ್ದು. ಆದರೆ ಅಮೆರಿಕ ಮೇಲೆ ಕಣ್ಣಿಟ್ಟಿರುವ ಚೀನಾ ಹಾಗೂ ರಷ್ಯಾ ಇತ್ತೀಚಿನ ದಿನಗಳಲ್ಲಿ ನಿಕಟ ಸಂಬಂಧ ಬೆಳೆಸಿಕೊಂಡಿವೆ. ಏತನ್ಮಧ್ಯೆ ಭಾರತವು ಚೀನಾ ಜತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ರಷ್ಯಾ ಹಾಗೂ ಅಮೆರಿಕ ಜತೆ ಉತ್ತಮ ಸಂಬಂಧ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.







