ಪೋಲಂಡ್ ಬಳಿ ರಷ್ಯಾ ಕ್ಷಿಪಣಿ ದಾಳಿ; ಹೆಚ್ಚಿದ ಉದ್ವಿಗ್ನತೆ

ವಾರ್ಸೊ: ನ್ಯಾಟೋ ಸದಸ್ಯ ದೇಶವಾದ ಪೋಲಂಡ್‍ನಿಂದ ಕೇವಲ 15 ಕಿಲೋಮೀಟರ್ ದೂರದ ಪಶ್ಚಿಮ ಉಕ್ರೇನ್‍ನಲ್ಲಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 35 ಮಂದಿ ಮೃತಪಟ್ಟಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.
ಇದು ಪೋಲಂಡ್‍ನಲ್ಲಿ ತಳಮಳಕ್ಕೆ ಕಾರಣವಾಗಿದ್ದು, ಪೋಲಂಡ್ ಪ್ರಜೆಗಳು ಪಾಸ್‍ಪೋರ್ಟ್ ಕಚೇರಿಗೆ ಧಾವಿಸುತ್ತಿದ್ದಾರೆ ಹಾಗೂ ಯುದ್ಧ ಸಂಭವಿಸಿದರೆ ಅಗತ್ಯ ಪೂರೈಕೆಗಳು ಕಡಿತಗೊಳ್ಳುವ ಭೀತಿ ಇದೆ ಎಂಬ ಕಾರಣದಿಂದ ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡುತ್ತಿದ್ದಾರೆ.
ದಶಕದಿಂದ ಕಂಡುಬರದಿದ್ದ ಉದ್ದದ ಸರತಿ ಸಾಲು ಸೋಮವಾರ ವಾರ್ಸೋದ ಕ್ರುಕ್ಝಾ ಬೀದಿಯಲ್ಲಿರುವ ಮುಖ್ಯ ಪಾಸ್‍ಪೋರ್ಟ್ ಕಚೇರಿಯಲ್ಲಿ ಕಂಡುಬಂತು. ಡಬ್ಬಗಳಲ್ಲಿ ಆಹಾರ, ನೀರಿನ ಬಾಟಲಿ, ಫ್ಲ್ಯಾಶ್‍ಲೈಟ್‍ಗಳು ಶಾಪರ್ ಗಳ ಬಾಸ್ಕೆಟ್‍ಗಳಲ್ಲಿ ತುಂಬಿದ್ದವು. ಭವಿಷ್ಯದ ಬಗ್ಗೆ ಆತಂಕದಿಂದ ಇರುವ ಜನಸಾಮಾನ್ಯರು ಬೀದಿಗಳಲ್ಲಿ ತಾಜಾ ಸುದ್ದಿಗಾಗಿ ತವಕಿಸುತ್ತಿದ್ದಾರೆ.
ಪಾಸ್‍ಪೋರ್ಟ್ ಕಚೇರಿಯ ಹೊರಗಿನ ಬೀದಿಯಲ್ಲಿ ಜಸ್ಟಿನಾ ವಿನ್ನಿಕಾ (44) ಎಂಬ ಮಹಿಳೆ ತಮ್ಮ 16 ವರ್ಷ ವಯಸ್ಸಿನ ಮಗಳು ಮಿಚಾಲಿನಾಗಾಗಿ ಪಾಸ್‍ಪೋರ್ಟ್ ಅರ್ಜಿ ಭರ್ತಿ ಮಾಡುತ್ತಿರುವುದು ಕಂಡುಬಂತು. "ನಮಗೆ ತುರ್ತಾಗಿ ಪಾಸ್‍ಪೋರ್ಟ್ ಬೇಕಾಗಿದೆ. ಏಕೆಂದರೆ ಹಳೆಯ ಪಾಸ್‍ಪೋರ್ಟ್ ಅವಧಿ ಮುಗಿದಿದ್ದು, ರಜೆಯ ಮೇಲೆ ತೆರಳಲು ಬಯಸಿದ್ದೇವೆ ಮತ್ತು ಪೋಲಂಡ್‍ನಲ್ಲಿ ಏನಾದರೂ ಸಂಭವಿಸಿದರೆ ವಿದೇಶಗಳಿಗೆ ಪ್ರಯಾಣ ಮಾಡಲು ಅನುಕೂಲವಾಗುವಂತೆ ಪಾಸ್‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೇವೆ" ಎಂದು ವಿನ್ನಿಕಾ ಹೇಳಿದರು.
ಪೋಲಂಡ್ ಗಡಿಯಲ್ಲಿ ಯುದ್ಧ ನಡೆಯುವ ಬಗ್ಗೆ ಭೀತಿ ಇದೆಯೇ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ, "ಇಂದು ಪ್ರತಿಯೊಬ್ಬರಿಗೂ ಭಯವಾಗಿದೆ" ಎಂದು ಉತ್ತರಿಸಿದರು.
ನ್ಯಾಟೋ ನಮ್ಮನ್ನು ರಕ್ಷಿಸುತ್ತದೆ ಎಂಬ ವಿಶ್ವಾಸವಿದೆ. ಆದರೆ ನಾವು ಪ್ರತಿಯೊಬ್ಬರೂ ಎರಡನೇ ಜಾಗತಿಕ ಯುದ್ಧದ ಇತಿಹಾಸವನ್ನು ಮತ್ತು ಮೈತ್ರಿಕೂಟ ವಿಫಲವಾದ್ದನ್ನು ನೆನಪಿಸಿಕೊಳ್ಳಬೇಕು" ಎಂದು ಅವರು ಹೇಳಿದರು. ಘಟನೆಗಳು ಭಿನ್ನ ರೀತಿಯಲ್ಲಿ ಸಂಭವಿಸಬಹುದು. ಪೋಲಂಡ್ ಜನರಲ್ಲಿ ಭಯ ಶುರುವಾಗಿದೆ ಎಂದು ಅವರು ವಿವರಿಸಿದರು.
ನಿರಾಶ್ರಿತರ ಮಾರ್ಗದ ಸಮೀಪ ನಡೆದಿರುವ ಈ ದಾಳಿ "ಭಯಾನಕ ಯುದ್ಧದಿಂದ ಓಡಿ ಹೋಗುತ್ತಿರುವ ನಾಗರಿಕರಲ್ಲಿ ಆತಂಕ ಪ್ರಚೋದಿಸುವ ಹುನ್ನಾರ" ಎಂದು ಪ್ರಧಾನಿ ಮಟೇಝ್ ಮೊರವಿಕ್ಕಿ ಹೇಳಿದ್ದಾರೆ.
ಪೋಲಂಡ್ ಈಗಾಗಲೇ 18 ಲಕ್ಷಕ್ಕೂ ಅಧಿಕ ಉಕ್ರೇನ್ ನಿರಾಶ್ರಿತರಿಗೆ ಆಶ್ರಯ ನೀಡಿದೆ. ಬಹುತೇಕ ಎಲ್ಲರೂ ಮಹಿಳೆಯರು ಮತ್ತು ಮಕ್ಕಳು.







