ಮಂಗಳೂರು ನಗರ ವ್ಯಾಪ್ತಿಯಲ್ಲಿ 1200ಕ್ಕೂ ಅಧಿಕ ಪೊಲೀಸರಿಂದ ಬಂದೋಬಸ್ತ್: ಕಮಿಷನರ್ ಶಶಿಕುಮಾರ್
ಹಿಜಾಬ್ ತೀರ್ಪು ಹಿನ್ನೆಲೆ

ಮಂಗಳೂರು : ಹೈಕೋರ್ಟ್ ನಿಂದ ಇಂದು ಹಿಜಾಬ್ ಕುರಿತು ತೀರ್ಪು ಹೊರಬೀಳಲಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ 1200ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್ ಕಾರ್ಯದಲ್ಲಿ ನಿಯೋಜನೆಗೊಂಡಿದ್ದಾರೆ ಎಂದು ಕಮಿಷನರ್ ಎನ್ . ಶಶಿಕುಮಾರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ಬಳಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಬಂದೋಬಸ್ತ್ ಬಗ್ಗೆ ಸೂಚನೆಗಳನ್ನು ನೀಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಹಿರಿಯ ಅಧಿಕಾರಿಗಳು ನಿನ್ನೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ. ಮಂಗಳೂರು ಕಮಿಷನರೇಟ್ 2000ಕ್ಕೂ ಅಧಿಕ ಪೊಲೀಸ್ ಅಧಿಕಾರಿ, ಸಿಬ್ಬಂದಿ ಬಲವನ್ನು ಹೊಂದಿದೆ ಎಂದರು.
ಬೆಳಗ್ಗೆ 9 ಗಂಟೆಯಿಂದಲೇ 1200ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಜಿಲ್ಲಾಧಿಕಾರಿ ಈಗಾಗಲೇ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಈ ನಡುವೆ ನಿಷೇಧಾಜ್ಞೆಯನ್ನು ಹೇರಲಾಗಿದೆ. ಈ ಹಿಂದೆ ಕೋವಿಡ್, ಹಿಜಾಬ್- ಕೇಸರಿಶಾಲು ಪ್ರಕರಣ ಸಂದರ್ಭದಲ್ಲಿಯೂ ಮಂಗಳೂರಿನ ಜನತೆ, ಸಂಘಟನೆಗಳು ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸಿದ್ದಾರೆ ಎಂದು ಅವರು ಹೇಳಿದರು.
ಡಿಸಿಪಿ ದಿನೇಶ್ ಕುಮಾರ್, ಎಸಿಪಿಗಳಾದ ಪಿ.ಎ. ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.