"ದಿಲ್ಲಿ ವಕ್ಫ್ ಮಂಡಳಿ ಅರ್ಜಿ ಸಲ್ಲಿಸಿದಲ್ಲಿ ನಿಝಾಮುದ್ದೀನ್ ಮರ್ಕಝ್ ಮರುತೆರೆಯುವ ಬಗ್ಗೆ ಪರಿಗಣಿಸಲಾಗುವುದು"
ಸುಪ್ರೀಂ ಕೋರ್ಟಿಗೆ ತಿಳಿಸಿದ ಕೇಂದ್ರ

ಹೊಸದಿಲ್ಲಿ: ದಿಲ್ಲಿ ವಕ್ಫ್ ಮಂಡಳಿಯು ಪೊಲೀಸರಿಗೆ ಅರ್ಜಿ ಸಲ್ಲಿಸಿದಲ್ಲಿ ಈ ವರ್ಷದ ರಮ್ಜಾನ್ ವೇಳೆ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಅನುವು ಮಾಡಿಕೊಡಲು ನಿಝಾಮುದ್ದೀನ್ ಮರ್ಕಝ್ ಮರುತೆರೆಯುವ ನಿಟ್ಟಿನಲ್ಲಿ ತಾನು ಪರಿಗಣಿಸುವುದಾಗಿ ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.
ನಿಝಾಮುದ್ದೀನ್ ಮರ್ಕಝ್‍ನಲ್ಲಿ 2020ರ ಮಾರ್ಚ್ ತಿಂಗಳಿನಲ್ಲಿ ನಡೆದ ತಬ್ಲೀಗಿ ಜಮಾತ್‍ನಿಂದ ದೇಶದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿತು ಎಂಬ
ಸುಳ್ಳು ಆರೋಪಗಳ ನಂತರ ಮರ್ಕಝ್ ಮಾರ್ಚ್ 31, 2020ರಿಂದ ಮುಚ್ಚಿದೆ.
ಮಸೀದಿಯನ್ನು ಮರುತೆರೆಯಲು ಅನುಮತಿ ಕೋರಿ ದಿಲ್ಲಿ ವಕ್ಫ್ ಮಂಡಳಿ ಕಳೆದ ವರ್ಷದ ಫೆಬ್ರವರಿಯಲ್ಲಿ ಅರ್ಜಿ ಸಲ್ಲಿಸಿತ್ತು. ಮಾರ್ಚ್ 4ರಂದು ನಡೆದ ಕೊನೆಯ ವಿಚಾರಣೆಯಲ್ಲಿ ಕೇಂದ್ರದ ಪರ ವಕೀಲರು ತಮ್ಮ ವಾದ ಮಂಡಿಸಿ ಮಸೀದಿಯ ಮೊದಲನೇ ಅಂತಸ್ತಿನಲ್ಲಿ ಪ್ರಾರ್ಥನೆಗೆ ಅನುಮತಿ ಕಲ್ಪಿಸಬಹುದು ಆದರೆ ಇಡೀ ಕಟ್ಟಡ ಮರುತೆರೆಯಲು ಸಾಧ್ಯವಿಲ್ಲ ಎಂದಿತ್ತು. ಈ ಕುರಿತು ಸ್ಪಷ್ಟ ನಿಲುವನ್ನು ತಿಳಿಸುವಂತೆ ನ್ಯಾಯಾಲಯ ಸರಕಾರಕ್ಕೆ ತಿಳಿಸಿತ್ತು.
ಸೋಮವಾರದ ವಿಚಾರಣೆ ವೇಳೆ ಮಾತನಾಡಿದ ಸರಕಾರದ ಪರ ವಕೀಲ ರಜತ್ ನಾಯರ್, ಮಾರ್ಚ್ 4ರಂದು ಹೊಂದಿರುವ ನಿಲುವನ್ನೇ ಕೇಂದ್ರ ಹೊಂದಿದೆ ಆದರೆ ಈ ಹಿಂದೆ 50 ಮಂದಿಗೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬಹುದೆಂದು ಹೇಳಲಾಗಿತ್ತು ಆ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಅಭ್ಯಂತರವಿಲ್ಲ ಎಂದರು.
ಮಸೀದಿ ಆಡಳಿತ ಮಂಡಳಿ ಪರ ಹಾಜರಿದ್ದ ಹಿರಿಯ ವಕೀಲೆ ರೆಬೆಕ್ಕಾ ಜಾನ್ ತಮ್ಮ ವಾದ ಮಂಡಿಸಿ, ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿಲ್ಲ ಹಾಗೂ ಸಾಬೀತಾದ ಯಾವುದೇ ಪ್ರಕರಣವಿಲ್ಲ. ಯಾವ ನಿಬಂಧನೆಯ ಆಧಾರದಲ್ಲಿ ಮಸೀದಿಯ ಕೀಲಿಗಳನ್ನು ತೆಗೆದುಕೊಂಡು ಹೋಗಲಾಗಿದೆ? ಪ್ರತಿಯೊಂದು ಧಾರ್ಮಿಕ ಸ್ಥಳ ತೆರೆದಿದೆ. ಮರ್ಕಝ್ ಮಸೀದಿ ಕುರಿತು ತಾರತಮ್ಯ ಬೇಡ, ವಿದೇಶೀಯರು ಬರುವುದಿಲ್ಲ ಹಾಗೂ ಕೇವಲ ಭಾರತೀಯರಿಗೆ ಮಾತ್ರ ಅವಕಾಶ ಎಂದು ಲಿಖಿತವಾಗಿ ತಿಳಿಸಬಲ್ಲೆವು,''ಎಂದರು.
ಮಸೀದಿಯ ಮೂರು ಅಂತಸ್ತುಗಳನ್ನು ಮರುತೆರೆಯಲು ಅನುಮತಿ ಕೋರಿ ದಿಲ್ಲಿ ಪೊಲೀಸರಿಗೆ ಅರ್ಜಿ ಸಲ್ಲಿಸಲು ನಂತರ ನ್ಯಾಯಾಲಯ ಅರ್ಜಿದಾರರಿಗೆ ಸೂಚಿಸಿದೆ.







