ದೊಡ್ಡಡ್ಕ ಭಜನಾ ಮಂದಿರದಲ್ಲಿ ವಿವಾದ; ಮಂದಿರದ ಅಧ್ಯಕ್ಷರಿಂದ ಸ್ಪಷ್ಠನೆ
ಪುತ್ತೂರು: ದೊಡ್ಡಡ್ಕ ಭಜನಾ ಮಂದಿರದಲ್ಲಿ ನಡೆದ ಹಲ್ಲೆ ಪ್ರಕರಣವು ವಿಷಾದನೀಯ ವಿಚಾರವಾಗಿದ್ದು, ಭಜನಾ ಮಂದಿರದ ವಿಚಾರದಲ್ಲಿ ಸ್ಥಳೀಯರಾದ ಸರೋಜಿನಿ ಆಚಾರ್ಯ ಮತ್ತು ಅವರ ಮಕ್ಕಳು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ದೊಡ್ಡಡ್ಕ ಶ್ರೀ ವರಮಹಾಲಕ್ಷೀ ಭಜನಾ ಮಂದಿರದ ಅಧ್ಯಕ್ಷ ಜಗದೀಶ ಭಂಡಾರಿ ತಿಳಿಸಿದ್ದಾರೆ.
ಅವರು ಮಂಗಳವಾರ ಪುತ್ತೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭಜನಾ ಮಂದಿರದ ಸ್ಥಳವು 1991ರಲ್ಲಿ ನಮಗೆ ಮಂಜೂರುಗೊಂಡಿದೆ ಎಂದು ಹೇಳಿದ್ದಾರೆ. ಆದರೆ ಈ ಜಾಗವು ಅವರಿಗೆ ಮಂಜೂರುಗೊಂಡಿರುವುದು 1996ರಲ್ಲಿ. ಆದರೆ 1992ರಿಂದಲೇ ಸಾರ್ವಜನಿಕರ ದೇಣಿಗೆ ಸಂಗ್ರಹಿಸಿ 1994ರಲ್ಲಿ ಇಲ್ಲಿ ಭಜನಾ ಮಂದಿರವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಆದರೆ ಬಳಿಕ ಸಮಿತಿಯ ಗಮನಕ್ಕೆ ಬಾರದೆ ಅವರು ಈ ಜಾಗವನ್ನು ಅಕ್ರಮ ಸಕ್ರಮದಡಿಯಲ್ಲಿ ಮಂಜೂರು ಮಾಡಿಕೊಂಡಿದ್ದಾರೆ. ಭಜನಾ ಮಂದಿರ ಸಮಿತಿಯಲ್ಲಿ ಅವರ ಜಾತಿಯವರಾಗಲಿ, ಕುಂಟುಂಬಸ್ಥರಾಗಲೀ ಸದಸ್ಯರಾಗಿರುವುದಿಲ್ಲ. ಆರಂಭದಲ್ಲಿ ಸರೋಜಿನಿ ಅವರ ಪತಿ ದಿವಂಗತ ಕೊರಗಪ್ಪ ಆಚಾರ್ಯ ಅವರು ಸದಸ್ಯರಾಗಿದ್ದರೂ ಬಳಿಕ ಬಿಟ್ಟು ಹೋಗಿದ್ದರು. ಇದೀಗ ಮಂದಿರದಲಿರುವುದು ನಮ್ಮ ಮನೆ ದೇವರು ಎಂದು ಹೇಳಿಕೆ ನೀಡಿರುವುದು ಸಂಪೂರ್ಣ ಸುಳ್ಳಾಗಿದೆ.
ದಿ. ಕೊರಗಪ್ಪ ಆಚಾರ್ಯ ಅವರಿಗೆ ಅಕ್ರಮ ಸಕ್ರಮದಲ್ಲಿ ಮಂಜೂರಾಗಿರುವ ಸ್ಥಳವು ಡಿಸಿ ಮನ್ನಾ ಮತ್ತು ಗೋಚರ ಪ್ರದೇಶವಾಗಿದೆ. ಅದನ್ನು ಮಂಜೂರು ಮಾಡಿವುದು ಅಸಿಂಧು ಎಂಬ ಅಪೀಲು ಸಹಾಯಕ ದಂಡಾಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ಸಹಾಯಕ ದಂಡಾಧಿಕಾರಿಗಳು ಈ ಸ್ಥಳಕ್ಕೆ ತಡೆಯಾಜ್ಞೆ ನೀಡಿರುತ್ತಾರೆ. ಆದರೆ ಭಜನಾ ಮಂದಿರದ ದಿನನಿತ್ಯದ ಪೂಜಾ ವಿಧಿ ವಿಧಾನ ಆಥವಾ ಇತರ ಕಾರ್ಯಕ್ರಮಗಳಿಗೆ ತಡೆಯಾಜ್ಞೆ ನೀಡಿರುವುದಿಲ್ಲ. ಭಜನಾ ಮಂದಿರಕ್ಕೆ ತಡೆಯಾಜ್ಞೆ ನೀಡಿದ್ದಾರೆ ಎಂಬ ಹೇಳಿಕೆಯೂ ಸುಳ್ಳಾಗಿದೆ.
ಸಿವಿಲ್ ನ್ಯಾಯಾಲಯದಲ್ಲಿನ ದಾವೆಯಲ್ಲಿಯೂ ಭಜನಾ ಮಂದಿರದ ಕಾರ್ಯಚಟುವಟಿಕೆ ಹಾಗೂ ರಸ್ತೆಗೆ ಅಡ್ಡಿಪಡಿಸದಂತೆ ಅವರಿಗೆ ನ್ಯಾಯಾಲಯ ಅದೇಶ ನೀಡಿದೆ. ಹೀಗಿದ್ದರೂ ಅವರು ಮಾ. 13ರಂದು ಭಜನಾ ಮಂದಿರದ ವಠಾರದಲ್ಲಿ ಸ್ವಚ್ಚತಾ ಕಾರ್ಯ ನಡೆಸುತ್ತಿರುವ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಪೂವಪ್ಪ ನಾಯ್ಕ ಮತ್ತು ಅವರ ಪತ್ನಿಯ ಮೇಲೆ ಸರೋಜಿನಿ ಆಚಾರ್ಯ ಮತ್ತು ಅವರ ಮಕ್ಕಳಾದ ನಾಗರಾಜ ಆಚಾರ್ಯ, ನಾರಾಯಣ ಆಚಾರ್ಯ ಸೊಸೆಯಂದಿರಾರ ದೀಪಾ ಮತ್ತು ಪೂಜಾ ಅವರು ಜಾತಿ ನಿಂದನೆ ಮಾಡಿ ಕತ್ತಿ ಮತ್ತು ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಮಹಾಲಕ್ಷ್ಮೀ ಭಜನಾ ಮಂದಿರ ಸೇವಾ ಟ್ರಸ್ಟ್ ಅಧ್ಯಕ್ಷ ಸೇಸಪ್ಪ ನಾಯ್ಕ, ಸದಸ್ಯರಾದ ನಾರಾಯಣ, ಸತೀಶ್ ಕುಮಾರ್ ಉಪಸ್ಥಿತರಿದ್ದರು.







