ಮಾ.17-19: ಪಡುಮಲೆ ಮಸೀದಿಯಲ್ಲಿ ವಾರ್ಷಿಕ ನೇರ್ಚೆ
ಪುತ್ತೂರು: ಸುಮಾರು 800 ವರ್ಷಗಳಿಗೂ ಅಧಿಕ ಇತಿಹಾಸವಿರುವ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಪಡುಮಲೆ(ಪಮ್ಮಲ) ಜುಮಾ ಮಸೀದಿಯಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಮಹಾನುಭಾವರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಆಂಡ್ ನೇರ್ಚೆ(ವಾರ್ಷಿಕ ಹರಿಕೆ), ಧಾರ್ಮಿಕ ಉಪನ್ಯಾಸ ಹಾಗೂ ಸಾಮೂಹಿಕ ಪ್ರಾರ್ಥನೆ ಮಾ.17ರಿಂದ 19ರ ತನಕ ನಡೆಯಲಿದೆ ಎಂದು ಮಸೀದಿ ಕಮಿಟಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ತಿಳಿಸಿದ್ದಾರೆ.
ಅವರು ಮಂಗಳವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾ. 17ರಂದು ಪಮ್ಮಲ ಖಾಝಿ ಸಯ್ಯದ್ ಮಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಮಸೀದಿಗೆ ನೂತನವಾಗಿ ನಿರ್ಮಿಸಿದ ಮಿನಾರವನ್ನು ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಆಶಿಕ್ ದಾರಿಮಿ ಅಲಪುಝ ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಮಾ.18ರಂದು ಮಸೂದ್ ಸಖಾಫಿ ಗೂಡಲ್ಲೂರು ಮುಖ್ಯ ಪ್ರಭಾಷಣ ನೀಡಲಿದ್ದಾರೆ.
ಮಾ. 19ರಂದು ಸಂಜೆ ಸೌಹಾರ್ದ ಸಂಗಮ ನಡೆಯಲಿದೆ. ಮಾಜಿ ಸಚಿವರಾದ ರಮಾನಾಥ ರೈ, ಯು.ಟಿ. ಖಾದರ್, ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವಾರು ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಪುತ್ತೂರು ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಹಸನ್ ಸಖಾಫಿ ಪೊಕೊಟ್ಟೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಸೀದಿ ಖತೀಬ್ ಶಂಸುದ್ದೀನ್ ದಾರಿಮಿ, ಸಮಿತಿ ಉಪಾಧ್ಯಕ್ಷ ಫಕ್ರುದ್ದೀನ್ ಹಾಜಿ, ಕೋಶಾಧಿಕಾರಿ ಅಬೂಬಕ್ಕರ್ ಹಾಜಿ, ಸದಸ್ಯರಾದ ಆದಂ ಹಾಜಿ ಮತ್ತು ಆಲಿಕುಂಞಿ ಹಾಜಿ ಪಿಲಿಕ್ಕುಡೆ ಉಪಸ್ಥಿತರಿದ್ದರು.







