'ಕಾಶ್ಮೀರ್ ಫೈಲ್ಸ್' ಗೆ ತೆರಿಗೆ ವಿನಾಯಿತಿ: ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿದ ಕನ್ನಡ ಚಿತ್ರರಂಗದ ಕೆಲ ಪ್ರಮುಖರು

ಬೆಂಗಳೂರು: ಬಿಜೆಪಿ ಆಡಳಿತದ ಗುಜರಾತ್, ಮಧ್ಯ ಪ್ರದೇಶ, ಹರ್ಯಾಣ ರಾಜ್ಯಗಳನ್ನು ಅನುಸರಿಸಿ ಕರ್ನಾಟಕದ ಬಿಜೆಪಿ ಸರಕಾರ ಕೂಡ 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಿರುವ ಕ್ರಮವನ್ನು ಕನ್ನಡ ಚಿತ್ರೋದ್ಯಮದ ಕೆಲವರು ಪ್ರಶ್ನಿಸಿದ್ದಾರೆ ಹಾಗೂ ಕೇವಲ ಸೈದ್ಧಾಂತಿಕ ಕಾರಣಗಳಿಗಾಗಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಅಭಿಪ್ರಾಯವೂ ವ್ಯಕ್ತವಾಗಿದ್ದಾಗಿ thenewsminute.com ವರದಿ ಮಾಡಿದೆ.
ಚಿತ್ರ ನಿರ್ಮಾಪಕಿ ಕವಿತಾ ಲಂಕೇಶ್ ಪ್ರತಿಕ್ರಿಯಿಸಿ "ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಚಿತ್ರಗಳನ್ನು ನಿರ್ಲಕ್ಷಿಸಲಾಗಿದೆ ಹಾಗೂ ಅವುಗಳನ್ನು ಯಾರೂ ವೀಕ್ಷಿಸುತ್ತಿಲ್ಲ. ಹಿಂದೆ ಇಂತಹ ಚಿತ್ರಗಳನ್ನು ಕನಿಷ್ಠ ದೂರದರ್ಶನದಲ್ಲಾದರೂ ಪ್ರದರ್ಶಿಸುವ ಅವಕಾಶವಿತ್ತು. ನಾವು ಕೂಡ ಬಂಗಾಳಿ ಅಥವಾ ಮಲಯಾಳಂ ಭಾಷೆಯ ಪ್ರಶಸ್ತಿ ವಿಜೇತ ಚಿತ್ರಗಳನ್ನು ವೀಕ್ಷಿಸಿದ್ದೇವೆ ಹಾಗೂ ಮೆಚ್ಚಿದ್ದೇವೆ. ಆದರೆ ಈ ನಿರ್ದಿಷ್ಟ ವಿಚಾರದಲ್ಲಿ ಕೇವಲ ಅಜೆಂಡಾ ಇದೆ. ಈಗ ಹಿಂದುತ್ವ ಅಜೆಂಡಾ ಮಾತ್ರ ಮುಖ್ಯವಾಗಿ ಬಿಟ್ಟಿದೆ. ಅಷ್ಟೊಂದು ಧ್ರುವೀಕರಣವಾಗಿ ಬಿಟ್ಟಿದೆ. ಜೈ ಭೀಮ್ ಚಲನಚಿತ್ರ ಏಕೆ ತೆರಿಗೆ ವಿನಾಯಿತಿ ಪಡೆದಿಲ್ಲ. ಏಕೆಂದರೆ ದಲಿತ ಜೀವಗಳಿಗೆ ಬೆಲೆಯಿಲ್ಲ, ಮೇಲ್ವರ್ಗದ ಹಿಂದುತ್ವವಾದಿಗಳ ಜೀವಗಳಿಗೆ ಮಾತ್ರ ಬೆಲೆಯಿದೆ" ಎಂದರು.
ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ನಿರ್ದೇಶಕರೊಬ್ಬರು ಪ್ರತಿಕ್ರಿಯಿಸಿ "ಸಾಧಾರಣ ನಿರ್ದೇಶಕರೊಬ್ಬರು ನಿರ್ದೇಶಿಸಿದ ಈ ಚಿತ್ರದ ಬಗ್ಗೆ ಏನೂ ಹೇಳಲಿಚ್ಛಿಸುವುದಿಲ್ಲ ಏಕೆಂದರೆ ಈ ಚಿತ್ರ ಕೇವಲ ಪ್ರಚಾರ ಉದ್ದೇಶ ಹೊಂದಿದೆ" ಎಂದರೆ ನಟಿಯೊಬ್ಬರು ಪ್ರತಿಕ್ರಿಯಿಸಿ ತಾವು ಟೀಕೆ ಎದುರಿಸಬಹುದಾದುದರಿಂದ ಬಹಿರಂಗವಾಗಿ ಚಿತ್ರಕ್ಕೆ ನೀಡಲಾದ ತೆರಿಗೆ ವಿನಾಯಿತಿಯನ್ನು ಪ್ರಶ್ನಿಸುವುದಿಲ್ಲ ಎಂದರು.
"ಇದು ಬಲಪಂಥೀಯರೊಬ್ಬರು ನಿರ್ಮಿಸಿದ ಹಾಗೂ ಬಲಪಂಥೀಯ ಸರಕಾರದ ಬೆಂಬಲವಿರುವ ಪ್ರಚಾರದ ಚಿತ್ರವೆಂಬುದರಲ್ಲಿ ಯಾವುದೇ ಸಂಶಯವಿಲ್ಲ"' ಎಂದು ಹಿರಿಯ ಕನ್ನಡ ಚಲನಚಿತ್ರ ನಿರ್ದೇಶಕ ಬಿ ಸುರೇಶ ಹೇಳಿದ್ದಾರೆ.
ನಟ ಚೇತನ್ ಕುಮಾರ್ ಮಾತನಾಡಿ, "ಸರಕಾರ ಇಂತಹ ಚಲನಚಿತ್ರವನ್ನು ತೆರಿಗೆ ವಿನಾಯಿತಿ ಅಥವಾ ಮಾದ್ಯಮ ಹೇಳಿಕೆಗಳ ಮೂಲಕ ಬೆಂಬಲಿಸಿ ಜನರಿಗೆ ಅದನ್ನು ವೀಕ್ಷಿಸಲು ಕರೆ ನೀಡಿದಾಗ ಇದು ತೆರಿಗೆದಾರರ ಹಣ ಬಳಸಿ ವೈಯಕ್ತಿಕ ಅಥವಾ ರಾಜಕೀಯ ಲಾಭ ಗಿಟ್ಟಿಸಿದಂತೆ" ಎಂದಿದ್ದಾರೆ.







