'ದಿ ಕಾಶ್ಮೀರ್ ಫೈಲ್ಸ್' ಬದಲು ಗುಜರಾತ್ ಗಲಭೆಯ ಕುರಿತ 'ಪರ್ಝಾನಿಯ' ಸಿನೆಮಾ ನೋಡಲು ಅವಕಾಶ ಕೊಡಿ: ಬಿ.ಕೆ ಹರಿಪ್ರಸಾದ್
ಪರಿಷತ್ ನಲ್ಲಿ ಕಾಂಗ್ರೆಸ್ - ಬಿಜೆಪಿ ಸದಸ್ಯರ ಮದ್ಯೆ ವಾಕ್ಸಮರ

ಬೆಂಗಳೂರು: ರಾಜ್ಯದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನೆಮಾಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರಿಗೆ ವಿನಾಯಿತಿ ಘೋಷಿಸಿದ್ದು, ಚಿತ್ರವನ್ನು ವೀಕ್ಷಿಸಲು ಇಂದು ವಿಧಾನ ಪರಿಷತ್ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದಸ್ಯರಿಗೆ ಸೂಚಿಸಿದ ಬೆನ್ನಲ್ಲೇ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಪರಿಷತ್ ನಲ್ಲಿ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಗುಜರಾತ್ ಹತ್ಯಾಕಾಂಡದ ಕುರಿತು ‘ಪರ್ಝಾನಿಯ ’ಮತ್ತು ವಾರಣಾಸಿ ದಲಿತ ಮಹಿಳೆಯ ಅತ್ಯಾಚಾರದ ಕುರಿತು ‘ವಾಟರ್’ ಅಂತ ಎರಡು ಸಿನಿಮಾ ಇವೆ ಅವನ್ನೂ ತೋರಿಸಿ ಎಂದು ಹೇಳಿದ್ದಾರೆ. ‘‘ನಾವು ಯಾವ ಸಿನೆಮಾ ನೋಡಬೇಕು ಅಂತ ಸದನದಲ್ಲಿ ಹೇಳೋ ಹಾಗಿಲ್ಲ. ಕೆಲವರು ಸದನದಲ್ಲಿ ಅಶ್ಲೀಲ ಚಿತ್ರ ನೋಡಿದ್ದಾರೆ. ನಾವೂ ಹಾಗಾದ್ರೆ ಅದನ್ನು ನೋಡಬೇಕಾ? ಸರ್ಕಾರ ಪಿಚ್ಚರ್ ತೋರಿಸೋದಕ್ಕೆ ಇದೆಯಾ? ಸಭಾಪತಿ ನಿಷ್ಪಕ್ಷಪಾತಿ ಆಗಿರಬೇಕು. ಪೀಠದಿಂದ ಯಾಕೆ ಇದನ್ನು ಹೇಳಿಸ್ತೀರಾ?’’ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಗದ್ದಲ ಉಂಟಾಗಿದ್ದು, ನಂತರ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಮಾಡಿದ ಘೋಷಣೆ ವಾಪಸ್ ಪಡೆಯಬೇಕು ಎಂದು ಪರಿಷತ್ ಬಾವಿಗಿಳಿದು ಧರಣಿ ನಡೆಸಿದರು.
ಇನ್ನೂ ಹತ್ತು ನಿಮಿಷಗಳ ನಂತರ ಮತ್ತೆ ಅಧಿವೇಶನ ಪ್ರಾರಂಭವಾದ ತಕ್ಷಣವೇ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕಾಶ್ಮೀರದ ಪಂಡಿತರ ಕೊಲೆಗಳಿಗೆ ಸಂಬಂಧಿಸಿದ ಆರ್ ಟಿ ಐ ಪ್ರತಿಯನ್ನ ಓದಿದ್ರು. ಆರ್ ಟಿ ಐನಲ್ಲಿ ಶ್ರೀನಗರದ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. 1990ರ ನಂತರ ಕಾಶ್ಮೀರಿ ಪಂಡಿತರ ಕೊಲೆಗಳ ಸಂಖ್ಯೆ 89, ಅದೇ ಅವಧಿಯಲ್ಲಿ ದಲಿತರು ಹಾಗೂ ಬೇರೆ ಸಮುದಾಯಕ್ಕೆ ಸೇರಿದ ಒಟ್ಟು 1635 ಜನರನ್ನ ಕೊಲೆ ಮಾಡಲಾಗಿದೆ. ಇದು ಆರ್ ಟಿ ಐನಲ್ಲಿ ಬಹಿರಂಗವಾಗಿದೆ ಎಂದರು.







