ಅನುದಾನ ಕಡಿತ ವಿರೋಧಿಸಿ ರಾಜ್ಯ ಸರಕಾರ-ಬಿಬಿಎಂಪಿ ವಿರುದ್ಧ ಶಾಸಕಿ ಸೌಮ್ಯರೆಡ್ಡಿ ನೇತೃತ್ವದಲ್ಲಿ ಮೌನ ಪ್ರತಿಭಟನೆ

ಬೆಂಗಳೂರು, ಮಾ.15: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಕಾಮಗಾರಿಗಳಿಗೆ ರಾಜ್ಯ ಸರಕಾರ ಮತ್ತು ಬಿಬಿಎಂಪಿಯ ಜಯನಗರ ಕ್ಷೇತ್ರದ ಅನುದಾನವನ್ನು ಕಡಿತ ಮಾಡಿರುವುದನ್ನ ಖಂಡಿಸಿ ಜಯನಗರ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಶಾಸಕಿ ಸೌಮ್ಯರೆಡ್ಡಿ ನೇತೃತ್ವದಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸೌಮ್ಯ ರೆಡ್ಡಿ, 2019-20ನೇ ಸಾಲಿನ ಆಯವ್ಯಯದಲ್ಲಿ ಕಾಂಗ್ರೆಸ್ ಸರಕಾರದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಜಯನಗರ ಕ್ಷೇತ್ರಕ್ಕೆ ರೂ.150 ಕೋಟಿ ಅನುದಾನ ಮೀಸಲಿಟ್ಟಿದ್ದರು. ಈಗ ರಾಜ್ಯ ಬಿಜೆಪಿ ಸರಕಾರ ಹಾಗೂ ಬಿಬಿಎಂಪಿ ಈ ಅನುದಾನವನ್ನು ಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೆ ನೀಡಿದ್ದಾರೆ. ಇದರಿಂದ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಅನ್ಯಾಯವಾಗಿದೆ.
ಈ ಅನುದಾನದ ಅಡಿಯಲ್ಲಿ ಬರುವ 750 ಕಾರ್ ಪಾರ್ಕಿಂಗ್, 1,500 ದ್ವಿಚಕ್ರ ವಾಹನಗಳ ನಿಲ್ದಾಣ, ಖ್ಯಾತ ಚಲನಚಿತ್ರ ನಿರ್ದೇಶಕರಾದ ದಿವಂಗತ ಪುಟ್ಟಣ್ಣ ಕಣಗಾಲ್‍ರವರ ಹೆಸರಿನಲ್ಲಿ ಎರಡು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು, ಎರಡು ರಂಗಮಂದಿರಗಳು ಮತ್ತು ಸುಸಜ್ಜಿತವಾದ ಮಳಿಗೆಗಳನ್ನು ನಿರ್ಮಿಸುವ ಯೋಜನೆ ಇತ್ತು. ಬಿಜೆಪಿ ಸರಕಾರ ಇರುವಾಗಲೇ ಭೂಮಿಪೂಜೆ ಸಹ ಆಗಿತ್ತು. ಈಗ ಮೂರು ವರ್ಷ ಕಳೆದರೂ ವಾಣಿಜ್ಯ ಸಂಕೀರ್ಣದ ಕಾಮಗಾರಿ ಪ್ರಾರಂಭಿಸಿಲ್ಲ. ಮಳಿಗೆ ಮಾಲಕರು ವ್ಯಾಪಾರವಿಲ್ಲದೆ ಸಂಸಾರ ನಡೆಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ.
ಹಳೆಯ ಸಂಕೀರ್ಣದ ಜಾಗಕ್ಕೆ ಸುತ್ತಲೂ ತಾತ್ಕಾಲಿಕ ಜಿಂಕ್‍ಶೀಟ್ ಅಳವಡಿಸಿ ಮುಚ್ಚಿರುತ್ತಾರೆ. ಈ ಮುಚ್ಚಿರುವ ಜಾಗ ಶೌಚಾಲಯ, ಕುಡುಕರು, ಪುಂಡುಪೋಕರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಸರಕಾರಿ ಕಚೇರಿಗಳಿಗೆ ಬರುವಂತಹ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗಿದೆ. ಮೊದಲು ಇಲ್ಲಿ ಕಲ್ಲು ಬೆಂಚುಗಳ ಮೇಲೆ ಕೂರುತ್ತಿದ್ದ ಹಿರಿಯ ನಾಗರಿಕರಿಗೆ ಜಾಗವಿಲ್ಲದಾಗಿ ತೊಂದರೆಯಾಗಿದೆ.
ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ ಮಳಿಗೆ ಮಾಲಕರು ಮತ್ತು ಸಾರ್ವಜನಿಕರು ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದರು. ಮಾಜಿ ಬಿಬಿಎಂಪಿ ಸದಸ್ಯರಾದ ಎನ್.ನಾಗರಾಜು ಕಾಂಗ್ರೆಸ್ ಕಾರ್ಯಕರ್ತರು ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







