ದ.ಕ. ಜಿಲ್ಲೆಯ ಮೂವರಿಗೆ ನರೇಗಾ ರಾಜ್ಯ ಪುರಸ್ಕಾರ

ಪುತ್ತೂರು: ಕಡಬ ತಾಲೂಕಿನ ಮಾಹಿತಿ, ಶಿಕ್ಷಣ, ಸಂವಹನ ಸಂಯೋಜಕ ಭರತ್ ರಾಜ್ ಕೆ ಸೇರಿದಂತೆ ದ.ಕ.ಜಿಲ್ಲೆಯ ಮೂವರಿಗೆ ನರೇಗಾ ರಾಜ್ಯ ಮಟ್ಟದ ಪುರಸ್ಕಾರ ಲಭಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2021- 22 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರಾಜ್ಯಮಟ್ಟದಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ ಅಧಿಕಾರಿ, ಸಿಬ್ಬಂದಿ ಕಾಯಕಬಂದು ಮತ್ತು ವೈಯಕ್ತಿಕ ಫಲಾನುಭವಿಗಳಿಗೆ ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ʼನರೇಗಾ ಹಬ್ಬ 2022ʼ ರಲ್ಲಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಡಬ ತಾಲೂಕಿನ ತಾಲೂಕು ಮಾಹಿತಿ, ಶಿಕ್ಷಣ, ಸಂವಹನ ಸಂಯೋಜಕ ಭರತ್ ರಾಜ್ ಕೆ. ಸೇರಿದಂತೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮ ಪಂಚಾಯತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನರೇಗಾ ವಿಭಾಗದ ಎಕೌಂಟ್ಸ್ ಮ್ಯಾನೇಜರ್ ನಿಶಾಂತ್ ಇವರನ್ನು ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿ ಸಿಬ್ಬಂದಿ,ಕಾಯಕಬಂದು ಇತರ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯವು ನಡೆಸಿದ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ದ.ಕ.ಜಿಲ್ಲೆಯ ಈ ಮೂವರನ್ನು ನರೇಗಾ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
31 ಜಿಲ್ಲೆಗಳ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಗಳ ಆಯ್ದ ವಿಭಾಗವಾರು ಸಾಧನೆಯ ಮೇಲೆ ಪ್ರಶಸ್ತಿ ಪ್ರದಾನ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರಪ್ಪ, ವಿಧಾನ ಪರಿಷತ್ ಸಭಾಪತಿ ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಶಿವಾಜಿನಗರ ಶಾಸಕ ರಿಜ್ವಾನ್ ಅಷರ್ದ್, ವಿಧಾನ ಪರಿಷತ್ ಶಾಸಕ ದೇವೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅತಿಕ್ ಎಲ್.ಕೆ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಶಿಲ್ಪಾ ನಾಗ್ ಮತ್ತಿತರ ಗಣ್ಯರ ಉಪಸ್ಥಿತರಿದ್ದರು.